ಮೂಡುಬಿದಿರೆ: ಕಥುವಾ ಪ್ರಕರಣ ಖಂಡಿಸಿ ಎಸ್‌ಕೆಎಸ್‌ಎಸ್‌ಎಫ್‌ನಿಂದ ಪ್ರತಿಭಟನೆ

Update: 2018-04-19 15:13 GMT

ಮೂಡುಬಿದಿರೆ, ಎ. 19:  ಕಥುವಾ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಮೂಡುಬಿದಿರೆ ಎಸ್‌ಕೆಎಸ್‌ಎಸ್‌ಎಫ್ ಘಟಕದಿಂದ ಗುರುವಾರ ಪ್ರತಿಭಟನೆ ನಡೆಯಿತು.

ಎಸ್‌ಕೆಎಸ್‌ಎಸ್‌ಎಫ್‌ನ ಜಿಲ್ಲಾ ಸಮಿತಿ ಸದಸ್ಯ ಯಾಸರ್ ಅರಾಫತ್ ಕೌಸರಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಆರಾಧನಾ ಕೇಂದ್ರ ಮತ್ತು ಪಾವಿತ್ರತೆಯನ್ನು ಹೊಂದಿರುವ ಸ್ಥಳ ದೇವಸ್ಥಾನ. ಸರ್ವೇ ಜನಾ: ಸುಖಿನೋ ಭವಂತು ಎಂದು ಸಾರಿರುವ ಮತ್ತು ಸೌಹಾರ್ದತೆಯಿಂದ ಕೂಡಿದ ದೇಶವಾಗಿರುವ ಭಾರತದಲ್ಲಿ ಇಂದು ಮನುಷ್ಯರು ಅಧೋಪತನದತ್ತ ಸಾಗುತ್ತಿದ್ದಾರೆ. ದೇವಸ್ಥಾನದಂತಹ ಪವಿತ್ರ ಕ್ಷೇತ್ರದಲ್ಲಿ ಪುಟಾಣಿ ಮಗುವಿನ ಮೇಲೆ ಕಾಮುಕರು ಸತತವಾಗಿ ಅತ್ಯಾಚಾರ ಮಾಡುವ ಮೂಲಕ ಬಾಲಕಿಯನ್ನು ಕೊಂದಿದ್ದಾರೆ. ಇಂತಹ ಕೃತ್ಯವನ್ನು ಮಾಡಿರುವ ದುಷ್ಕರ್ಮಿಗಳಿಗೆ ಮರಣ ದಂಡನೆ ವಿಧಿಸಬೇಕು. ಈ ಘಟನೆಯಲ್ಲಿ ಪೊಲೀಸರೂ ಶಾಮೀಲಾಗಿದ್ದು ಅವರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ಮೂಡುಬಿದಿರೆ ಮಸೀದಿಯ ಧರ್ಮ ಗುರು ಮುಸ್ತಫಾ ಯಮಾನಿ ಮಾತನಾಡಿ ಸರ್ವ ಧರ್ಮಿಯರನ್ನೊಳಗೊಂಡ ಜಾತ್ಯಾತೀತ ರಾಷ್ಟ್ರವಾಗಿರುವ ಭಾರತದಲ್ಲಿ ಯಾರೇ ಆಗಲಿ, ಯಾವುದೇ ಧರ್ಮಕ್ಕೂ ಸೇರಿದವರಾಗಲಿ ಅತ್ಯಾಚಾರದಂತಹ ಹೀನ ಕೃತ್ಯವನ್ನು ಮಾಡಿ ದೇಶವನ್ನು ಅಂತಾರಾಷ್ಟ್ರಮಟ್ಟದಲ್ಲಿ ತಲೆ ತಗ್ಗಿಸುವಂತೆ ಮಾಡಿರುವ ಕಾಮುಕರನ್ನು ಜನರ ಮಧ್ಯದಲ್ಲಿ ಗಲ್ಲಿಗೇರಿಸುವಂತಹ ಕೆಲಸವನ್ನು ಭಾರತ ಸರಕಾರ ಮಾಡಬೇಕು ಮತ್ತು ಈ ದೇಶದಲ್ಲಿ ಹುಟ್ಟಿರುವ ಯಾವುದೇ ಹೆಣ್ಣಿಗೂ ಮುಂದೆ ಇಂತಹ ಕಷ್ಟಗಳು ಎದುರಾಗಬಾರದು ಈ ಬಗ್ಗೆ ಸರಕಾರಗಳು ಕ್ರಮ ಕೈಗೊಳ್ಳುವಂತಾಗಬೇಕು ಎಂದು ಒತ್ತಾಯಿಸಿದರು.

ಇದಕ್ಕೂ ಮೊದಲು ಇಲ್ಲಿನ ರಾಜೀವ್ ಗಾಂಧಿ ಕಾಂಪ್ಲೆಕ್ಸ್‌ನಿಂದ ತಹಶೀಲ್ದಾರ್ ಕಚೇರಿಯವರೆಗೆ ಮೆರವಣಿಗೆ ನಡೆಸಿ ತಹಶೀಲ್ದಾರ್ ಶಿವಶಂಕರಪ್ಪ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಮೂಡುಬಿದಿರೆ ವಲಯ ಎಸ್‌ಕೆಎಸ್‌ಎಸ್‌ಎಫ್ ಅಧ್ಯಕ್ಷ ಮಾಲಿಕ್ ಅಝೀಝ್ ಮನವಿ ಪತ್ರ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News