ಎ.23ರಂದು ವಿನಯಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

Update: 2018-04-20 07:14 GMT

ಉಡುಪಿ, ಎ.20: ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿನಯ ಕುಮಾರ್ ಸೊರಕೆ ಎ.23 ರಂದು ಬೆಳಗ್ಗೆ 11ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿನಯ ಕುಮಾರ್ ಸೊರಕೆ, ನಾಮಪತ್ರ ಸಲ್ಲಿಕೆಗೆ ಮುನ್ನ ಕಾಪು ಜರ್ನಾದನ ದೇವಸ್ಥಾನ ಮತ್ತು ಕಾಪು ಮಾರಿಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು. ಅದೇ ರೀತಿ ಪೊಲಿಪು ಮಸೀದಿ, ಉದ್ಯಾವರ ಚರ್ಚ್, ಕಟಪಾಡಿ ವಿಶ್ವನಾಥ ಕ್ಷೇತ್ರ ಹಾಗೂ ಉಡುಪಿ ಶ್ರೀಕೃಷ್ಣ ಮಠಕ್ಕೂ ಭೇಟಿ ನೀಡಲಾಗುವುದು ಎಂದರು.

ನಂತರ ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಉಡುಪಿಗೆ ತೆರಳಿ ನಾಪಮತ್ರ ಸಲ್ಲಿಸಲಾಗುವುದು. ಈ ಹಿನ್ನೆಲೆಯಲ್ಲಿ ಎ.21ರಂದು ಹಿರಿಯಡ್ಕದಲ್ಲಿ ಬೆಳಗ್ಗೆ 9ಗಂಟೆಗೆ ಮತ್ತು ಸಂಜೆ 4ಗಂಟೆಗೆ ಶಿರ್ವದಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಭ್ರಷ್ಚಾಚಾರಕ್ಕೆ ಆಧಾರ ತೋರಿಸಲಿ
ಅನುಪಮಾ ಶೆಣೈಯನ್ನು ಈವರೆಗೆ ನಾನು ಮುಖತಃ ನೋಡಿಲ್ಲ. ಅವರು ಕಾಪು ಕ್ಷೇತ್ರದವರು ಎಂದು ತಿಳಿದುಕೊಂಡಿದ್ದೇನೆ. ಅವರು ನನ್ನ ಎದುರು ಚುನಾವಣೆ ಸ್ಪರ್ಧಿಸುವುದರಿಂದ ನನ್ನ ವಿರುದ್ಧ ಭ್ರಷ್ಟಾಚಾರದಂತಹ ಆರೋಪ ಮಾಡುವುದು ಸಹಜ. ಅದಕ್ಕೆ ಆಧಾರ ತೋರಿಸಲಿ. ನಾನು ಕಾಪು ಕ್ಷೇತ್ರದಲ್ಲಿ ಯಾವುದೆಲ್ಲ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ ಎಂಬ ಪುಸ್ತಕವನ್ನು ಅವರಿಗೆ ಕಳುಹಿಸಿ ಕೊಡುತ್ತೇನೆ ಎಂದು ಸೊರಕೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 130 ಸ್ಥಾನ ಪಡೆದು ಮತ್ತೆ ಅಧಿಕಾರಕ್ಕೆ ಬರಲಿದೆ. ಮುಂದೆ ಕೂಡ ನಾನು ಯಾವುದೇ ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಇರುವುದಿಲ್ಲ. ಪಕ್ಷದ ಅವಕಾಶ ಕೊಟ್ಟರೆ ಜವಾಬ್ದಾರಿ ನಿಬಾಯಿಸುತ್ತೇನೆ. ಇಲ್ಲದಿದ್ದರೆ ಜನಪ್ರತಿನಿಧಿಯಾಗಿ ಇರುತ್ತೇನೆ ಎಂದರು.

ಕಾಪುವಿಗೆ ಈವರೆಗೆ ಯಾವುದೇ ಗುರುತು ಎಂಬುದಿರಲಿಲ್ಲ. ಈಗ ಪುರಸಭೆ ಹಾಗೂ ತಾಲೂಕು ರಚನೆಯ ಮೂಲಕ ಕಾಪು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದೆ ಎಂದ ಅವರು, ಎಲ್ಲ ಪಕ್ಷಗಳಲ್ಲಿಯೂ ಭಿನ್ನಮತ ಇರುವುದು ಸಹಜ. ಅದನ್ನು ಮುಖಂಡರು ಸರಿಪಡಿಸುತ್ತಾರೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಕಾಪು ದಿವಾಕರ್ ಶೆಟ್ಟಿ, ಜಿಪಂ ಸದಸ್ಯ ವಿಲ್ಸನ್ ರೋಡಿಗ್ರಸ್, ಪುರಸಭೆ ಉಪಾಧ್ಯಕ್ಷ ಉಸ್ಮಾನ್, ಉಸ್ತುವಾರಿ ಮಹಾಬಲ ಕುಂದರ್ ಉಪಸ್ಥಿತ ರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News