ಪತ್ರಕರ್ತೆಯರ ವಿರುದ್ಧ ಅತ್ಯಂತ ಅವಹೇಳನಕಾರಿ ಪೋಸ್ಟ್ ಹಾಕಿದ ತಮಿಳುನಾಡು ಬಿಜೆಪಿ ಮುಖಂಡ
ಚೆನ್ನೈ,ಎ.20 : ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ‘ದಿ ವೀಕ್’ ಪತ್ರಕರ್ತೆಯೊಬ್ಬರ ಕೆನ್ನೆ ಸವರಿದಕ್ಕಾಗಿ ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರು ಕ್ಷಮೆ ಯಾಚಿಸಿದ ಬೆನ್ನಿಗೇ ಹಿರಿಯ ಬಿಜೆಪಿ ನಾಯಕ ಎಸ್.ವಿ. ಶೇಖರ್ ಅವರು ಮಹಿಳಾ ಪತ್ರಕರ್ತರ ವಿರುದ್ಧ ನಿಂದನಾತ್ಮಕ ಹೇಳಿಕೆಗಳನ್ನೊಳಗೊಂಡ ಫೇಸ್ ಬುಕ್ ಪೋಸ್ಟ್ ಒಂದನ್ನು ಶೇರ್ ಮಾಡಿ ವಿವಾದಕ್ಕೀಡಾಗಿದ್ದಾರೆ.
ಹಿರಿಯ ಬಿಜೆಪಿ ನಾಯಕ ಎಚ್ ರಾಜಾ ಅವರು ಡಿಎಂಕೆ ನಾಯಕಿ ಕನ್ನಿಮೋಝಿ ಅವರನ್ನು ಕರುಣಾನಿಧಿಯವರ ಅಕ್ರಮ ಪುತ್ರಿ ಎಂದು ಹೇಳಿದ ಕೆಲವೇ ಗಂಟೆಗಳಲ್ಲಿ ಎದ್ದಿರುವ ಈ ಹೊಸ ವಿವಾದ ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಕೇಂದ್ರದ ಬಿಜೆಪಿ ಸರಕಾರವನ್ನು ಅವಮಾನಿಸುವ ಒಂದೇ ಉದ್ದೇಶದಿಂದ ಪತ್ರಕರ್ತೆ ಲಕ್ಷ್ಮಿ ಸುಬ್ರಹ್ಮಣ್ಯನ್ ಅವರು ರಾಜ್ಯಪಾಲರ ವಿರುದ್ಧ ಆರೋಪ ಹೊರಿಸಿದ್ದಾರೆಂದು ಶೇಖರ್ ಅವರು ‘ಮಧುರೈ ವಿಶ್ವವಿದ್ಯಾಲಯ, ರಾಜ್ಯಪಾಲರು ಮತ್ತು ಹುಡುಗಿಯೊಬ್ಬಳ ಕೆನ್ನೆಗಳು’ ಎಂಬ ಶೀರ್ಷಿಕೆಯಡಿ ಶೇರ್ ಮಾಡಿದ್ದ ಫೇಸ್ ಬುಕ್ ಪೋಸ್ಟ್ ತಿಳಿಸಿದೆ.
ದಿ ವೀಕ್ ಪತ್ರಕರ್ತೆ ಟ್ವೀಟ್ ಮಾಡಿ ರಾಜ್ಯಪಾಲರು ಆಕೆಯ ಕೆನ್ನೆ ಸವರಿದ ನಂತರ ಆಕೆ ತನ್ನ ಮುಖವನ್ನು ಹಲವಾರು ಬಾರಿ ತೊಳೆದುಕೊಂಡಿದ್ದಾಗಿ ಹೇಳಿದ್ದಕ್ಕೆ ಪ್ರತಿಯಾಗಿ ಶೇಖರ್ ಅವರು ಶೇರ್ ಮಾಡಿದ ಟ್ವೀಟ್ “ಆಕೆಯನ್ನು ಮುಟ್ಟಿದ್ದಕ್ಕಾಗಿ ರಾಜ್ಯಪಾಲರು ತಮ್ಮ ಕೈಗಳನ್ನು ಫಿನಾಯಿಲ್ ನಿಂದ ತೊಳೆಯಬೇಕು,'' ಎಂದು ಪೋಸ್ಟ್ ಮಾಡಿದ್ದಾರೆ.
ತಿರುಮಲೈ ಎಸ್ ಎಂಬವರು ಬರೆದಿದ್ದಾರೆನ್ನಲಾದ ಪೋಸ್ಟ್ ನಲ್ಲಿ ವಿಶ್ವವಿದ್ಯಾಲಯಗಳಿಗಿಂತ ಮಾಧ್ಯಮ ಸಂಸ್ಥೆಗಳಲ್ಲಿ ಹೆಚ್ಚು ಲೈಂಗಿಕ ದೌರ್ಜನ್ಯಗಳು ನಡೆಯುತ್ತವೆ ಎಂದಿದೆ. “ಮಹಿಳೆಯೊಬ್ಬಳು ಗಣ್ಯರೊಂದಿಗೆ ಮಲಗದೇ ಇದ್ದರೆ ಆಕೆ ವರದಿಗಾರ್ತಿ ಅಥವಾ ನ್ಯೂಸ್ ರೀಡರ್ ಆಗಲು ಸಾಧ್ಯವಿಲ್ಲ,'' ಎಂದೂ ಅದರಲ್ಲಿ ಬರೆಯಲಾಗಿದೆ.
“ಅನಕ್ಷರಸ್ಥ ಫಟಿಂಗರು ಈಗ ಮಾಧ್ಯಮದಲ್ಲಿದ್ದಾರೆ, ಆಕೆ (ದಿ ವೀಕ್ ಪತ್ರಕರ್ತೆ) ಇದರಿಂದ ಹೊರತಾಗಿಲ್ಲ,'' ಎಂದೂ ಬರೆಯಲಾಗಿದೆ. “ಆದರೆ ಕೆಲವರು ಇದಕ್ಕೆ ಹೊರತಾಗಿದ್ದಾರೆ. ನಾನು ಅವರನ್ನು ಮಾತ್ರ ಗೌರವಿಸುತ್ತೇನೆ. ಇಲ್ಲದೇ ಹೋದಲ್ಲಿ ಇಡೀ ತಮಿಳುನಾಡಿನ ಮಾಧ್ಯಮ ಕ್ರಿಮಿನಲ್ ಗಳು ಹಾಗೂ ಬ್ಲ್ಯಾಕ್ ಮೇಲ್ ಮಾಡುವವರ ಮುಷ್ಠಿಯಲ್ಲಿದೆ,'' ಎಂದು ಫೇಸ್ ಬುಕ್ ಪೋಸ್ಟ್ ಮಾಡಿದ್ದಾರೆ.
ಆದರೆ ಈ ಪೋಸ್ಟ್ ನಂತರ ನಾಪತ್ತೆಯಾಗಿದೆ. ಶೇಖರ್ ಪ್ರಕಾರ ಈ ಪೋಸ್ಟ್ ಅನ್ನು ಅಮೆರಿಕಾದಲ್ಲಿ ಬಿಜೆಪಿಯ ಕಟ್ಟಾ ಬೆಂಬಲಿಗರಾದ ತಿರುಮಲೈ ಎಂಬವರು ಬರೆದಿದ್ದಾರೆ. “ಆ ಪೋಸ್ಟ್ ಅನ್ನು ಸಂಪೂರ್ಣ ಓದದೇ ಶೇರ್ ಮಾಡಿದ್ದೆ. ಯಾರನ್ನೂ ನಿಂದಿಸುವುದಿಲ್ಲ. ಅದನ್ನು ಡಿಲೀಟ್ ಮಾಡಬೇಕೆಂದಿದ್ದೆ. ಆದರೆ ಫೇಸ್ ಬುಕ್ ಅದನ್ನು ಬ್ಲಾಕ್ ಮಾಡಿದೆ,'' ಎಂದು ಅವರು ಹೇಳಿದ್ದಾರೆ.
ಆದರೆ ಪತ್ರಕರ್ತರು ಈ ಫೇಸ್ ಬುಕ್ ಪೋಸ್ಟ್ ವಿರುದ್ಧ ಸಿಡಿದೆದ್ದಿದ್ದಾರಲ್ಲದೆ ಬಿಜೆಪಿ ಕ್ಷಮೆ ಯಾಚಿಸಬೇಕೆಂದೂ ಆಗ್ರಹಿಸಿದ್ದಾರೆ.