ಈ ಹೋಟೆಲ್‌ನಲ್ಲಿ ಚಿನ್ನದ ಸ್ನಾನದ ತೊಟ್ಟಿಯಿದೆ ಗೊತ್ತೇ....?

Update: 2018-04-20 11:14 GMT

ವಿಯೆಟ್ನಾಮ್‌ನ ಹೋಟೆಲ್‌ವೊಂದು ನಾವು ಕನಸಿನಲ್ಲಷ್ಟೇ ಕಾಣಬಹುದಾದ ಸೌಲಭ್ಯಗಳನ್ನು ತನ್ನ ಗ್ರಾಹಕರಿಗೆ ಒದಗಿಸುತ್ತಿದೆ. ಸಂಪೂರ್ಣವಾಗಿ ಚಿನ್ನದಿಂದ ಮಾಡಲಾದ ಬಾತ್‌ಟಬ್‌ನಲ್ಲಿ ಸ್ನಾನ ಮಾಡಲು ನೀವು ಬಯಸುತ್ತಿದ್ದರೆ ತಡವೇಕೆ? ಈಗಲೇ ಡಾ ನಾಂಗ್ ಸಿಟಿಯಲ್ಲಿರುವ ಗೋಲ್ಡನ್ ಬೇ ಹೋಟೆಲ್‌ಗೆ ಹೊರಡಿ. ಅಲ್ಲಿಯ ಪ್ರೆಸಿಡೆಂಟ್ಸ್ ಸ್ವೀಟ್‌ನಲ್ಲಿ ಈ ಚಿನ್ನದ ಬಾತ್‌ಟಬ್ ಇದೆ. ಅಂದ ಹಾಗೆ ಇಲ್ಲಿ ಬಾತ್‌ಟಬ್ ಮಾತ್ರವಲ್ಲ.... ಟಾಯ್ಲೆಟ್,ಬಾತ್‌ರೂಮ್ ಸಿಂಕ್‌ಗಳು ಮತ್ತು ಊಟದ ಪರಿಕರಗಳೂ ಚಿನ್ನದಿಂದಲೇ ನಿರ್ಮಿತಗೊಂಡಿವೆ.

ಇಲ್ಲಿದೆ ಗೋಲ್ಡನ್ ಬೇ ಹೋಟೆಲ್ ಮತ್ತು ಅದರಲ್ಲಿಯ ಐಷಾರಾಮಿ ಕೋಣೆಗಳ ಇಣುಕು ನೋಟ...

ಹೋಟೆಲ್‌ನ ವೆಬ್‌ಸೈಟ್‌ನಲ್ಲಿ ಹೇಳಿರುವಂತೆ ಇಲ್ಲಿ ಫೆಂಗ್‌ಶುಯಿ ತತ್ತ್ವಶಾಸ್ತ್ರ,ಚಿನ್ನದ ಪರಿಕಲ್ಪನೆ ಮತ್ತು ನಿಜವಾದ ಆದರಾತಿಥ್ಯವನ್ನು ನೀಡುವ ಉದ್ದೇಶವನ್ನು ಎರಕ ಹೊಯ್ಯಲಾಗಿದೆ.

ಈ ಹೋಟೆಲ್ ತನ್ನ ಗ್ರಾಹಕರಿಗೆ ಹ್ಯಾನ್ ನದಿ,ಪೂರ್ವ ಸಮುದ್ರ ಮತ್ತು ಸನ್ ಟ್ರಾ ಪೆನಿನ್ಸುಲಾದ ಅದ್ಭುತ ನೋಟವನ್ನು ಒದಗಿಸುತ್ತಿದೆ. ಅದು ವಿಶ್ವದ ಆರು ಅತ್ಯಂತ ಸುಂದರ ಬೀಚ್‌ಗಳಲ್ಲೊಂದಾಗಿರುವ ಮೈ ಖೇ ಬೀಚ್‌ನಿಂದ ಕೇವಲ 2.5 ಕಿ.ಮೀ.ದೂರದಲ್ಲಿ ತಲೆಯೆತ್ತಿದೆ.

ಹೋಟೆಲ್‌ನ 28ನೇ ಮಹಡಿಯಲ್ಲಿ ನಾಲ್ಕು ಪ್ರೆಸಿಡೆಂಟ್ ಸ್ವೀಟ್‌ಗಳಿವೆ.

ಹೋವಾ ಬಿನ್ಹ್ ಗ್ರೀನ್ ಕಾರ್ಪೊರೇಷನ್ ಈ ಹೋಟೆಲ್‌ನ ಒಡೆತನವನ್ನು ಹೊಂದಿದ್ದು,ಇದು ವಿಯೆಟ್ನಾಮ್‌ನ ಐದು ಅಗ್ರ ಉದ್ಯಮ ಸಮೂಹಗಳಲ್ಲೊಂದಾಗಿದೆ. ಹೋಟಲ್ ರೂಮ್‌ಗಳಲ್ಲದೆ ಈ ಆಸ್ತಿಯಲ್ಲಿ ಎರಡು ಬೆಡ್‌ರೂಮ್‌ಗಳ ವಸತಿ ಅಪಾರ್ಟ್‌ಮೆಂಟ್‌ಗಳೂ ಇವೆ. ಪಂಚತಾರಾ ಸ್ಥಾನಮಾನವನ್ನು ಹೊಂದಿರುವ ಈ ಹೋಟೆಲ್‌ನ ಬಗ್ಗೆ ಯಾವುದೇ ಟೀಕೆಗಳು ಈವರೆಗೆ ಕೇಳಿಬಂದಿಲ್ಲ.

2017,ಅಕ್ಟೋಬರ್ 1ರಂದು ಅಧಿಕೃತವಾಗಿ ಆರಂಭಗೊಂಡಿರುವ ಗೋಲ್ಡನ್ ಬೇ ಹೋಟೆಲ್ ವಿಶ್ವದ ಅತ್ಯಂತ ಎತ್ತರದ ಮತ್ತು ಬೃಹತ್ ‘24ಕೆ ಇನ್ಫಿನಿಟಿ ಸ್ವಿಮಿಂಗ್ ಪೂಲ್’ ನ ದಾಖಲೆಯನ್ನು ಹೊಂದಿದೆ.

ಈ ಹೋಟೆಲ್‌ನಲ್ಲಿ ತಂಗಲು ಬಯಸಿದ್ದರೆ ನಿಮ್ಮ ಅಗತ್ಯಗಳಿಗನುಗುಣವಾಗಿ ಒಂದು ರಾತ್ರಿಗೆ 8,500 ರೂ.ಗಳಿಂದ 15,700 ರೂ.ವರೆಗೆ ಬಾಡಿಗೆಯನ್ನು ವಿಧಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News