ಮಂಗಳೂರು: ಜಮ್ಮು ಕಾಶ್ಮೀರ ಮುಖ್ಯಮಂತ್ರಿ ರಾಜೀನಾಮೆಗೆ ಸೆಂಟ್ರಲ್ ಕಮಿಟಿ ಆಗ್ರಹ

Update: 2018-04-21 07:49 GMT

ಮಂಗಳೂರು, ಎ.21: ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯ 8ರ ಹರೆಯದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸಲು ವಿಫಲರಾದ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ರಾಜೀನಾಮೆಗೆ ದ.ಕ. ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿ ಆಗ್ರಹಿಸಿದೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಮಿಟಿಯ ಅಧ್ಯಕ್ಷ ಹಾಜಿ ಮುಹಮ್ಮದ್ ಮಸೂದ್ ಮುಖ್ಯಮಂತ್ರಿ ಮೆಹಬೂಬಾ ಓರ್ವ ಹೆಣ್ಣಾಗಿ, ತಾಯಿಯಾಗಿ, ಸಹೋದರಿಯಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ಈ ಪ್ರಕರಣವನ್ನು ಮುಚ್ಚಿ ಹಾಕಲು ಮುಂದಾದವರ ವಿರುದ್ಧ ಕಠಿಣ ಕ್ರಮ ಜರಗಿಸಬೇಕಿತ್ತು. ಆದರೆ ಅದ್ಯಾವುದನ್ನೂ ಮಾಡದೆ ರಾಜಕೀಯ ಮಾಡಿದ್ದಾರೆ. ಇದು ಖಂಡನೀಯವಾಗಿದ್ದು, ಈ ಬಗ್ಗೆ ರಾಷ್ಟ್ರಪತಿ ಮಧ್ಯ ಪ್ರವೇಶಿಸಬೇಕು ಎಂದರು.

ಜಮ್ಮುವಿನ ಕಥುವಾ ಮತ್ತು ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದ ಪ್ರಕರಣ ಅತ್ಯಂತ ಹೇಯವಾದುದು. ಈ ಪ್ರಕರಣದ ಆರೋಪಿಗಳ ವಿರುದ್ಧ ತ್ವರಿತ ನ್ಯಾಯಾಲಯದ ಮೂಲಕ ತನಿಖೆ ನಡೆಸಿ ಗಲ್ಲು ಶಿಕ್ಷೆ ನೀಡಬೇಕು. ಕಥುವಾ ಘಟನೆಯನ್ನು ಬೆಂಬಲಿಸಿದ ಬಿಜೆಪಿಯ ಇಬ್ಬರು ಸಚಿವರ ರಾಜೀನಾಮೆ ಪಡೆದರೆ ಸಾಲದು, ಅವರನ್ನು ಶಾಸಕ ಸ್ಥಾನದಿಂದ ಉಚ್ಛಾಟಿಸಬೇಕು. ಸಂತ್ರಸ್ತೆಯರು ಮತ್ತವರ ಕುಟುಂಬಕ್ಕೆ ಸೂಕ್ತ ರಕ್ಷಣೆಯೊಂದಿಗೆ ನ್ಯಾಯ ಒದಗಿಸಬೇಕು. ಬಾಲಕಿಯ ಪರ ಕಾನೂನು ಹೋರಾಟ ಮಾಡುವ ನ್ಯಾಯವಾದಿ ದೀಪಿಕಾ ಸಿಂಗ್ ರಜಾವತ್‌ರ ಕರ್ತವ್ಯಕ್ಕೆ ಅಡ್ಡಿಪಡಿಸಿದ ವಕೀಲರ ಸಂಘದ ಅಧ್ಯಕ್ಷರ ವಿರುದ್ಧವೂ ಕಠಿಣ ಕ್ರಮ ಜರಗಿಸಬೇಕು ಎಂದು ಮುಹಮ್ಮದ್ ಮಸೂದ್ ಒತ್ತಾಯಿಸಿದರು.

ಈಗಾಗಲೆ ಪ್ರಕರಣದ ಬಗ್ಗೆ ರಾಷ್ಟ್ರಪತಿ ಧ್ವನಿ ಎತ್ತಿದ್ದಾರೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ಕೇಂದ್ರ ಸರಕಾರದ ಬೇಟಿ ಬಚಾವೋ, ಬೇಟಿ ಪಡಾವೋ ಆಂದೋಲನದ ರಾಯಭಾರಿಯಾಗಿರುವ ಹಿರಿಯ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಕೂಡ ಈ ಪ್ರಕರಣದ ವಿರುದ್ಧ ಧ್ವನಿ ಎತ್ತಿರುವಾಗ ಪ್ರಧಾನಿ ನರೇಂದ್ರ ಮೋದಿಯ ಮೌನ ಅಚ್ಚರಿ ಮೂಡಿಸಿದೆ ಎಂದು ಹೇಳಿದ ಮುಹಮ್ಮದ್ ಮಸೂದ್, ಅವಿಭಜಿತ ದ.ಕ.ಜಿಲ್ಲೆಯ ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳ ಪ್ರಮುಖರ ಸಹಿತ ಎಲ್ಲರೂ ಯಾವುದೇ ಗಾಳಿಮಾತಿಗೆ ಕಿವಿಗೊಡದೆ ಶಾಂತಿ ಕಾಪಾಡಲು ಶ್ರಮಿಸಬೇಕು ಎಂದು ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸೆಂಟ್ರಲ್ ಕಮಿಟಿಯ ಪದಾಧಿಕಾರಿಗಳಾದ ಹಾಜಿ ಇಬ್ರಾಹೀಂ ಕೋಡಿಜಾಲ್, ಹನೀಫ್ ಹಾಜಿ ಬಂದರ್, ಬಾಷಾ ತಂಙಳ್, ಅಬೂಬಕರ್ ಕುದ್ರೋಳಿ, ಕೆ. ಅಶ್ರಫ್, ಎಂ.ಎ. ಅಶ್ರಫ್, ಅಹ್ಮದ್ ಬಾವ ಬಜಾಲ್, ಅಹ್ಮದ್ ಬಾವ ಪಡೀಲ್, ಸಿ.ಎಂ. ಮುಸ್ತಫಾ, ಸಿ.ಎಂ. ಹನೀಫ್, ಮುಹಮ್ಮದ್ ಬಪ್ಪಳಿಗೆ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News