ದೇಶಭ್ರಷ್ಟ ‘ಆರ್ಥಿಕ ಅಪರಾಧಿಗಳ’ ಆಸ್ತಿ ಮುಟ್ಟುಗೋಲಿಗೆ ಅವಕಾಶ ನೀಡುವ ಸುಗ್ರೀವಾಜ್ಞೆಗೆ ಸಂಪುಟದ ಸಮ್ಮತಿ

Update: 2018-04-21 14:28 GMT

ಹೊಸದಿಲ್ಲಿ,ಎ.21: ದೇಶದಿಂದ ಪರಾರಿಯಾಗುವ ಸಾಲ ಸುಸ್ತಿದಾರರಂತಹ ಆರ್ಥಿಕ ಅಪರಾಧಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅಧಿಕಾರಿಗಳಿಗೆ ಅವಕಾಶವನ್ನು ಕಲ್ಪಿಸುವ ‘ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಸುಗ್ರೀವಾಜ್ಞೆ 2018’ಅನ್ನು ಘೋಷಿಸುವ ಪ್ರಸ್ತಾಪಕ್ಕೆ ಕೇಂದ್ರ ಸಂಪುಟವು ಶನಿವಾರ ಹಸಿರು ನಿಶಾನೆಯನ್ನು ತೋರಿಸಿದೆ.

ವಿಜಯ್ ಮಲ್ಯ ಮತ್ತು ನೀರವ್ ಮೋದಿಯಂತಹ ಆರ್ಥಿಕ ಅಪರಾಧಿಗಳು ಭಾರತೀಯ ಕಾನೂನು ಕ್ರಮವನ್ನು ತಪ್ಪಿಸಿಕೊಳ್ಳಲು ಹಿಂಜರಿಯುವಂತೆ ಮಾಡುವ ಉದ್ದೇಶವನ್ನು ಹೊಂದಿರುವ ಸುಗ್ರೀವಾಜ್ಞೆಗೆ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು ಒಪ್ಪಿಗೆಯನ್ನು ನೀಡಿದ್ದು,ರಾಷ್ಟ್ರಪತಿಗಳು ಅಂಕಿತ ಹಾಕಿದ ನಂತರ ಜಾರಿಗೊಳ್ಳಲಿದೆ.ಮಾ.12ರಂದು ಮೊದಲ ಬಾರಿಗೆ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತಾದರೂ ವಿವಿಧ ವಿವಾದಗಳಿಂದಾಗಿ ಸದನದಲ್ಲಿ ಉಂಟಾಗಿದ್ದ ಬಿಕ್ಕಟ್ಟಿನಿಂದಾಗಿ ಅಂಗೀಕಾರ ಸಾಧ್ಯವಾಗಿರಲಿಲ್ಲ.

ಈ ಸುಗ್ರೀವಾಜ್ಞೆಯಿಂದಾಗಿ ದೇಶಭ್ರಷ್ಟ ಆರ್ಥಿಕ ಅಪರಾಧಿಗಳು ವಿಚಾರಣೆಯನ್ನೆ ದುರಿಸಲು ಭಾರತಕ್ಕೆ ಮರಳುವುದು ಅನಿವಾರ್ಯವಾಗುವುದರಿಂದ ಇದು ಇಂತಹ ಅಪರಾಧಿಗಳಿಗೆ ಸಂಬಂಧಿಸಿದಂತೆ ಕಾನೂನಿನ ಆಡಳಿತವನ್ನು ಮರುಸ್ಥಾಪಿಸುವ ನಿರೀಕ್ಷೆಯಿದೆ. ಅಲ್ಲದೆ ಇಂತಹ ಅಪರಾಧಿಗಳು ಬಾಕಿಯಿಟ್ಟಿರುವ ಸಾಲದ ಹೆಚ್ಚಿನ ವಸೂಲಿಯನ್ನು ಸಾಧಿಸಲು ಮತ್ತು ತಮ್ಮ ಹಣಕಾಸು ಸ್ಥಿತಿಯನ್ನು ಉತ್ತಮ ಗೊಳಿಸಿಕೊಳ್ಳಲು ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ಈ ಸುಗ್ರೀವಾಜ್ಞೆಯು ನೆರವಾಗಲಿದೆ.

ಅನುಸೂಚಿತ ಅಪರಾಧಕ್ಕಾಗಿ ಬಂಧನ ವಾರಂಟ್ ಹೊರಡಿಸಲಾಗಿರುವ ಮತ್ತು ಕ್ರಿಮಿನಲ್ ಕಾನೂನು ಕ್ರಮವನ್ನು ತಪ್ಪಿಸಿಕೊಳ್ಳಲು ಭಾರತದಿಂದ ಪಲಾಯನ ಮಾಡಿರುವ ಅಥವಾ ವಿದೇಶದಲ್ಲಿದ್ದು ಕ್ರಿಮಿನಲ್ ವಿಚಾರಣೆಯನ್ನು ಎದುರಿಸಲು ಭಾರತಕ್ಕೆ ಮರಳಲು ನಿರಾಕರಿಸುವ ವ್ಯಕ್ತಿಯನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಸುಗ್ರೀವಾಜ್ಞೆಯಲ್ಲಿ ವ್ಯಾಖ್ಯಾನಿಸಲಾಗಿದೆ.

ಅಲ್ಲದೆ ಇಂತಹ ಪ್ರಕರಣಗಳು ನ್ಯಾಯಾಲಯಗಳಿಗೆ ಹೆಚ್ಚಿನ ಹೊರೆಯಾಗದಿರಲು 100 ಕೋ.ರೂ. ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತವನ್ನೊಳಗೊಂಡಿರುವ ಅಪರಾಧ ಪ್ರಕರಣಗಳನ್ನು ಮಾತ್ರ ಸುಗ್ರೀವಾಜ್ಞೆಯ ವ್ಯಾಪ್ತಿಯಲ್ಲಿ ಸೇರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News