ಪಕ್ಷದಲ್ಲಿ ಬಂಡಾಯವಿಲ್ಲ: ಧರ್ಮೇದ್ರ ಪ್ರಧಾನ್‌

Update: 2018-04-21 17:14 GMT

ಮಂಗಳೂರು, ಎ. 21: ದಕ್ಷಿಣ ಕನ್ನಡ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಬಂಡಾಯದ ಧ್ವನಿ ಬಹಿರಂಗವಾಗಿ ಕೇಳಿ ಬರುತ್ತಿದ್ದರೂ ಪಕ್ಷದಲ್ಲಿ ಯಾವುದೇ ಬಂಡಾಯವಿಲ್ಲ ಎಂದು ಕರಾವಳಿಯ ಚುನಾವಣಾ ಉಸ್ತುವಾರಿ, ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಪಕ್ಷದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಕೆಟ್ ಆಕಾಂಕ್ಷಿಗಳು ಇದ್ದಿರಬಹುದು. ಅಂತಿಮವಾಗಿ ಗೆಲ್ಲುವ ಅಭ್ಯರ್ಥಿಗಳಿಗೆ ಪಕ್ಷ ಟಿಕೆಟ್ ನೀಡಿದೆ. ಯಾರು ಅಭ್ಯರ್ಥಿಯಾಗಬೇಕೆಂದು ಪಕ್ಷದ ಅಧ್ಯಕ್ಷರು ತೀರ್ಮಾನಿಸಿದ್ದಾರೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು.

ಶೀಘ್ರದಲ್ಲೇ ಪ್ರಧಾನಿ ಮಂಗಳೂರಿಗೆ

ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶೀಘ್ರದಲ್ಲೇ ಮಂಗಳೂರಿಗೆ ಆಗಮಿಸಲಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ, ಅಭಿವೃದ್ಧಿ ಕುಂಠಿತ ಪ್ರಮುಖ ಚುನಾವಣಾ ವಿಚಾರಗಳಾಗಿದ್ದು, ಇದನ್ನೇ ಪ್ರಚಾರ ವಿಷಯಗಳನ್ನಾಗಿ ಕೈಗೆತ್ತಿಕೊಂಡಿದ್ದೇವೆ. ಕೇಂದ್ರ ಸರಕಾರ ಜಾರಿ ಮಾಡಿದ ಜಿಎಸ್‌ಟಿ ಮತ್ತು ನೋಟು ಅಮಾನ್ಯೀಕರಣದ ಪರಿಣಾಮಗಳು ಈ ಬಾರಿ ಚುನಾವಣೆ ವಿಷಯ ಆಗುವುದಿಲ್ಲ. ಉತ್ತರ ಪ್ರದೇಶ, ತ್ರಿಪುರ ಚುನಾವಣೆಗಳಲ್ಲೂ ಇದು ಸಾಬೀತಾಗಿದೆ ಎಂದರು.

ಬಿಜೆಪಿ ಈಗಾಗಲೇ ಪ್ರಚಾರದಲ್ಲಿ ನಿರತರಾಗಿದ್ದು, ನಾಮಪತ್ರದ ಪ್ರಕ್ರಿಯೆಗಳೆಲ್ಲ ಮುಗಿದ ಬಳಿಕ ಎ.28ರಿಂದ ಅಂತಿಮ ಹಂತದ ಪ್ರಚಾರ ಕಾರ್ಯ ನಡೆಯಲಿದೆ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ ಎಂದರು.

ಉತ್ತರ ಪ್ರದೇಶ ಸಚಿವ ಮಹೇಂದ್ರ ಸಿಂಗ್, ಸಂಸದ ನಳಿನ್ ಕುಮಾರ್ ಕಟೀಲು, ಮುಖಂಡರಾದ ಮೋನಪ್ಪ ಭಂಡಾರಿ, ಗಣೇಶ್ ಕಾರ್ಣಿಕ್, ಬ್ರಿಜೇಶ್ ಚೌಟ, ಸುಲೋಚನಾ ಜಿ.ಕೆ. ಭಟ್, ಸುದರ್ಶನ್ ಮೂಡುಬಿದಿರೆ, ರವಿಶಂಕರ್ ಮಿಜಾರ್, ಕಿಶೋರ್ ರೈ, ರಾಜೇಶ್ ಕೊಟ್ಟಾರಿ ಮೊದಲಾದವರು ಉಪಸ್ಥಿತರಿದ್ದರು.

 ಕಥುವಾ ಪ್ರಕರಣ: ಕಾನೂನು ಕ್ರಮ

ಕಥುವಾದಲ್ಲಿ ಬಾಲಕಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ ಎಂದರು.

ಕೃಷ್ಣ ಪಾಲೆಮಾರ್ ಬಗ್ಗೆ ಗೌರವವಿದೆ: ನಳಿನ್‌

ಮಾಜಿ ಸಚಿವ ಜೆ.ಕೃಷ್ಣ ಪಾಲೆಮಾರ್ ಟಿಕೆಟ್ ವಂಚನೆಯಿಂದ ನೋವಿನಿಂದ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಟಿಕೆಟ್ ನೀಡುವ ವಿಷಯದಲ್ಲಿ ನಾನು ಯಾರ ಪರವಾಗಲಿ, ವಿರುದ್ಧವಾಗಲಿ ಇಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, ಕೃಷ್ಣ ಪಾಲೆಮಾರ್ ಹಿರಿಯ ನಾಯಕರಾಗಿದ್ದಾರೆ. ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಚಿವರಾಗಿ ಅನುಭವ ಹೊಂದಿದವರು. ಅವರ ಬಗ್ಗೆ ನನಗೆ ಗೌರವವಿದೆ. ಸೀಟ್ ಹಂಚುವ ಕಾರ್ಯವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೇ ಮಾಡಿದ್ದಾರೆ. ಯಾರ ಪರ ಅಥವಾ ವಿರುದ್ಧವಾಗಿ ಟಿಕೆಟ್ ಕೇಳುವ ಹಕ್ಕು ನನಗಿಲ್ಲ ಎಂದರು.

ಸತ್ಯಜಿತ್ ಸುರತ್ಕಲ್ ಅಭಿಮಾನಿಗಳ ಆಕ್ರೋಶ ಕುರಿತ ಪ್ರಶ್ನೆಗೆ ಉತ್ತರಿಸಿದ ಸಂಸದ ನಳಿನ್ ಕುಮಾರ್ ಕಟೀಲ್, ಪಕ್ಷಕ್ಕಾಗಿ ದುಡಿದವರು ಟಿಕೆಟ್ ಕೇಳುವುದು ತಪ್ಪಲ್ಲ. ಅವರನ್ನು ಸಮಾಧಾನಪಡಿಸುವ ಜವಾಬ್ದಾರಿ ನಮ್ಮದು. ಕೃಷ್ಣ ಪಾಲೆಮಾರ್ ಮತ್ತು ಸತ್ಯಜಿತ್ ವಿಚಾರವನ್ನು ಪಕ್ಷದ ನಾಯಕರ ಗಮನಕ್ಕೆ ತರುತ್ತೇವೆ ಎಂದು ನಳಿನ್ ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News