ಬಂಟ್ವಾಳ ಗಲಭೆ ಮುಕ್ತ ಆಗಬೇಕಾದರೆ ರೈ ಸೋಲಬೇಕು: ಹರಿಕೃಷ್ಣ ಬಂಟ್ವಾಳ

Update: 2018-04-21 19:04 GMT

ಬಂಟ್ವಾಳ, ಎ.21: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ-ಮುಸ್ಲಿಮರು ಸಾಮರಸ್ಯದಿಂದ ಬದುಕಬೇಕಾದರೆ ರಮಾನಾಥ ರೈ ಅವರಿಗೆ ಮತ ಹಾಕಬಾರದು. ರಮಾನಾಥ ರೈ ಸೋತರೆ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯುವುದಿಲ್ಲ. ಯಾವುದೇ ಹತ್ಯೆಯೂ ನಡೆಯುವುದಿಲ್ಲ. ಬಂಟ್ವಾಳ ಗಲಭೆ ಮುಕ್ತ ಆಗಬೇಕಾದರೆ ರಮಾನಾಥ ರೈ ಸೋಲಬೇಕು. ಒಂದು ವೇಳೆ ಗೆದ್ದರೆ ಮತ್ತೆ ಬಂಟ್ವಾಳದಲ್ಲಿ ಅಮಾಯಕರ ಕೊಲೆಗಳು, ಅಹಿತಕರ ಘಟನೆಗಳು ನಡೆಯುತ್ತವೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪೂರ್ವ ತಯಾರಿಯ ಕುರಿತು ಅವರು ಪತ್ರಿಕೆಯೊಂದಿಗೆ ಮಾತನಾಡಿದರು.

ಬಂಟ್ವಾಳದಲ್ಲಿ ರಾಜೇಶ್ ನಾಯಕ್ ಗೆಲ್ಲುತ್ತಾರೆ. ಇದರಲ್ಲಿ ಯಾವುದೇ ಸಂಶಯಬೇಡ. ಇದು ರಮಾನಾಥ ರೈ ಅವರ ಕೊನೆಯ ಚುನಾವಣೆಯಾಗಿದೆ. ರಮಾನಾಥ ರೈ ಅವರಿಗೆ ಸೋಲಿನ ಭೀತಿ ಉಂಟಾಗಿದೆ. ‘ಸಂಕಟ ಬಂದಾಗ ವೆಂಕಟರಮಣ’ ಎಂಬ ಹಾಗೆ ಇದುವೆರಗೂ ಜನಾರ್ದನ ಪೂಜಾರಿ ಅವರ ಮನೆ ಬಾಗಿಲು ನೋಡದ ರೈ, ಇದೀಗ ಅವರ ಕಾಲು ಹಿಡಿಯಲು ಹೊರಟಿದ್ದಾರೆ. ಪೂಜಾರಿಯ ಮುಖದಲ್ಲಿ ಚರ್ಮವೇ ಇಲ್ಲ ಎಂದ ರೈ ಇದೀಗ ಅಧಿಕಾರಕ್ಕೋಸ್ಕರ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎಂದು ಹೇಳಿದರು.

ಪೂಜಾರಿ ಅವರ ಮನೆಗೆ ಯಾರೇ ಬಂದರೂ ಅವರನ್ನು ಸತ್ಕಾರ ಮಾಡುವ ಒಳ್ಳೆಯ ಗುಣ ಪೂಜಾರಿಯವರಲ್ಲಿದೆ. ಅದೇ ರೀತಿ ರಮಾನಾಥ ರೈ ಅವರನ್ನು ಸತ್ಕಾರ ಮಾಡಿದ್ದಾರೆ. ವಿನಯ್ ಕುಮಾರ್ ಸೊರಕೆ, ಮಾಜಿ ಮೇಯರ್ ಕೆ. ಅಶ್ರಫ್, ಮೊಯ್ದಿನ್ ಬಾವ ಕೂಡಾ ಹೋಗಿದ್ದಾರೆ. ನಳಿನ್ ಕುಮಾರ್ ಕಟೀಲುಗೆ ಐದಾರು ಬಾರಿ ಆಶೀರ್ವಾದ ಮಾಡಿದ್ದಾರೆ. ನಾಳೆ ರಾಜೇಶ್ ನಾಯಕ್ ಅವರು ಹೋದರೂ ಕೂಡಾ ಅವರನ್ನು ಆಶೀರ್ವಾದ ಮಾಡುತ್ತಾರೆ ಎಂದು ಹೇಳಿದರು.

ಜನಾರ್ದನ ಪೂಜಾರಿ ಮನೆಗೆ ತೆರಳಿ ಕಾಲು ಹಿಡಿದರೆ ಬಿಲ್ಲವ ಸಮಾಜವೇ ಅವರ ಬಳಿಗೆ ಹೋಗುತ್ತದೆ ಎಂಬ ಭ್ರಮೆ ಬಿಡಬೇಕು. ರಮಾನಾಥ ರೈ ಅವರು ಕೈಕಾಲು ಹೊಡೆದರೂ, ಪೂಜಾರಿ ಅವರನ್ನು ತಲೆಯಲ್ಲಿ ಎತ್ತಿಕೊಂಡು ಹೋದರೂ ಪ್ರಜ್ಞಾವಂತ ಬಂಟ್ವಾಳದ ಜನರು ಇವರಿಗೆ ಖಂಡಿತವಾಗಿಯೂ ಮತ ಹಾಕುವುದಿಲ್ಲ ಎಂದು ಹೇಳಿದರು.

ರೈ ಪೂಜಾರಿಯನ್ನು ಅನುಮಾನಿಸಿ ಅವರ ಬಗ್ಗೆ ಬೇಡದ್ದು ಮಾತನಾಡಿದ್ದರು. ಈ ಬಗ್ಗೆ ಪೂಜಾರಿ ತನ್ನಲ್ಲಿ ಹೇಳಿಕೊಂಡಿದ್ದರು. ಈ ಬಗ್ಗೆ ತಾನು ಪ್ರೆಸ್‌ಮೀಟ್‌ನಲ್ಲಿ ಹೇಳಿದ್ದೆ. ಇದನ್ನು ರೈ ನಿರಾಕರಿಸಿದಾಗ ಆಣೆ ಪ್ರಮಾಣ ಮಾಡಲು ರೈ ಅವರನ್ನು ಧರ್ಮಸ್ಥಳ ಮತ್ತು ಪಣೋಲಿಬೈಲು ದೇವಸ್ಥಾನಕ್ಕೆ ಕರೆದಿದ್ದೆ. ಆದರೆ ರೈ ಹೆದರಿ ಬರಲಿಲ್ಲ ಎಂದು ಹೇಳಿದರು.

ಅಭಿವೃದ್ಧಿಯೇ ಕಾಣದ ಎಷ್ಟೋ ಗ್ರಾಮಗಳು ಬಂಟ್ವಾಳದಲ್ಲಿದೆ. ಮೂಲಭೂತ ಸೌಕರ್ಯ ವಂಚಿತ ಹಾಗೂ ನಡೆಯಲು ಸಾಧ್ಯವಾಗದ ರಸ್ತೆಗಳಿರುವ ಎಷ್ಟೋ ಗ್ರಾಮಗಳಿಗೆ. ಈ ಎಲ್ಲ ಅವ್ಯವಸ್ಥೆಗಳು ರಾಜೇಶ್ ನಾಯಕ್ ಅವರ ಪಾದಾಯಾತ್ರೆ ಸಂದರ್ಭದಲ್ಲಿ ನಮಗೆ ಗೊತ್ತಾಗಿದೆ ಎಂದು ಹರಿಕೃಷ್ಣ ಹೇಳಿದರು.

ರಮಾನಾಥ ರೈಯಿಂದ ಮುಸ್ಲಿಮರ ಕಣ್ಣಿಗೆ ಮಣ್ಣೆರೆಚುವ ತಂತ್ರ

ಬಂಟ್ವಾಳದ ಮುಸ್ಲಿಮರಿಗೆ ರಮಾನಾಥ ರೈ ಏನು ಕೊಟ್ಟಿದ್ದಾರೆ ? ಮುಸ್ಲಿಮ್ ಸಮುದಾಯದ ಎಷ್ಟು ಗಂಡು ಮಕ್ಕಳನ್ನು ಡಾಕ್ಟರ್, ವಕೀಲ, ಇಂಜಿನಿಯರ್, ಪೊಲೀಸ್ ಆಗುವಂತೆ ಮಾಡಿದ್ದಾರೆ. ಮುಸ್ಲಿಮ್ ಸಮುದಾಯದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿದ ಸಾವಿರಾರು ಹೆಣ್ಣು ಮಕ್ಕಳು ಇದ್ದಾರೆ. ಅವರಿಗೆ ಒಳ್ಳೆಯ ಕೆಲಸ ಸಿಗುವಂತೆ ಮಾಡಿದ್ದಾರೆಯೇ ?. ಇವೆಲ್ಲವನ್ನು ಬಂಟ್ವಾಳದ ಮುಸ್ಲಿಮರು ಅರ್ಥ ಮಾಡಿಕೊಳ್ಳಬೇಕು. ಕೇವಲ ಮರ, ಮರಳು ಕದಿಯಲು ಮುಸ್ಲಿಮ್ ಯುವಕರನ್ನು ರಮಾನಾಥ ರೈ ಉಪಯೋಗಿಸುತ್ತಾರೆ. ಇದರಿಂದ ಅದೆಷ್ಟೋ ಮುಸ್ಲಿಮ್ ಯುವಕರು ಅನ್ಯಾಯವಾಗಿ ಪೊಲೀಸರ ಅತಿಥಿಯಾಗಿದ್ದಾರೆ. ಇದುವೆ ಮುಸ್ಲಿಮ್ ಸಮುದಾಯಕ್ಕೆ ರಮಾನಾಥ ರೈ ನೀಡಿದ ಕೊಡುಗೆ ಎಂದು ಹರಿಕೃಷ್ಣ ಬಂಟ್ವಾಳ ಆರೋಪಿಸಿದರು.

ಜಲೀಲ್ ಕರೋಪಾಡಿ ಹತ್ಯೆ ಆರೋಪಿಗಳು ಯಾರು ಎಂಬುದು ಎಲ್ಲರಿಗೂ ತಿಳಿದಿದೆ
ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ, ಕಾಂಗ್ರೆಸ್ ಪಕ್ಷದ ನಾಯಕ ಅಬ್ದುಲ್ ಜಲೀಲ್ ಹತ್ಯೆ ಆರೋಪಿಗಳನ್ನು ಯಾರು ರಕ್ಷಣೆ ಮಾಡುತ್ತಿದ್ದಾರೆ ಎಂಬುದು ಜಿಲ್ಲೆಯ ಎಲ್ಲಾ ಜನರಿಗೆ ತಿಳಿದಿದೆ. ಜಲೀಲ್ ಹತ್ಯೆ ಪ್ರಕರಣದ ಆರೋಪಿಗಳ ಬಂಧನವಾಗದಿರುವುದು ಹಾಗೂ ಅವರನ್ನು ರಕ್ಷಣೆ ಮಾಡುತ್ತಿರುವುದು ಖೇದಕರ. ಜಲೀಲ್ ಕರೋಪಾಡಿ ಹಾಗೂ ಅಶ್ರಫ್ ಕಲಾಯಿ ಹತ್ಯೆ ಪ್ರಕರಣ ತನಿಖೆ ಸರಿಯಾಗಿ ನಡೆದರೆ ಅದು ರಮಾನಾಥ ರೈ ಅವರ ಮನೆಯ ಅಂಗಳದಲ್ಲಿ ಬಂದು ನಿಲ್ಲುತ್ತದೆ ಎಂದು ಹರಿಕೃಷ್ಣ ಬಂಟ್ವಾಳ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News