ಧೋರಣೆ, ಭಾಷಣಗಳಿಂದ ಕನ್ನಡ ಭಾಷೆ ಉಳಿಯಲ್ಲ: ಅಂಬಾತನಯ ಮುದ್ರಾಡಿ

Update: 2018-04-22 15:06 GMT

ಉಡುಪಿ, ಎ.22: ಉಡುಪಿ ರಂಗಭೂಮಿಯ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ಸಹಯೋಗದೊಂದಿಗೆ ಕಾಲೇಜಿನ ಮುದ್ದಣ ಮಂಟಪದಲ್ಲಿ ಹಮ್ಮಿ ಕೊಳ್ಳಲಾಗಿರುವ ಮೂರು ದಿನಗಳ ದಿ.ಕುತ್ಪಾಡಿ ಆನಂಗ ಗಾಣಿಗರ ಸ್ಮರಣಾರ್ಥ ಆನಂದೋತ್ಸವದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಕತ್ವದ ‘ತಲ್ಲೂರು ಗಿರಿಜಾ- ಡಾ.ಶಿವರಾಮ ಶೆಟ್ಟಿ’ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಅವರಿಗೆ ರವಿವಾರ ಪ್ರದಾನ ಮಾಡಲಾಯಿತು.

ಇದಕ್ಕೂ ಮುನ್ನ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅಂಬಾ ತನಯ ಮುದ್ರಾಡಿ, ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣದ ಪಡೆದ ಎಲ್ಲರು ಕೂಡ ಬುದ್ದಿವಂತರಲ್ಲ. ಅದೇ ರೀತಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರು ದಡ್ಡರಲ್ಲ. ಕೇವಲ ಧೋರಣೆ ಹಾಗೂ ಭಾಷಣಗಳಿಂದ ಮಾತ್ರ ಕನ್ನಡ ಭಾಷೆ ಯನ್ನು ಉಳಿಸಲು ಸಾಧ್ಯವಿಲ್ಲ. ಪೋಷಕರು ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರಿಸುವ ಮೂಲಕ ಕನ್ನಡವನ್ನು ಉಳಿಸಿ ಬೆಳೆಸಬೇಕು ಎಂದರು.

ಶ್ರೀರಾಮನ ಅಸ್ತಿತ್ವಕ್ಕೆ ದಾಖಲೇ ಇಲ್ಲ ಎಂದು ಹೇಳುವವರಿ ದ್ದಾರೆ. ಆದರೆ ರಾಮನ ಇರುವಿಕೆಗೆ ವೈಜ್ಞಾನಿಕವಾದ ಹಲವು ಪುರಾವೆಗಳು ಈಗಲೂ ಜೀವಂತ ವಾಗಿವೆ. ಯಾವುದೇ ಒಂದು ವಿಷಯವನ್ನು ಸುಳ್ಳು ಎಂದು ಹೇಳುವುದಕ್ಕೆ ಯಾವುದೇ ಪುರಾವೆ ಬೇಡ. ಆದರೆ ಸತ್ಯ ಎಂದು ಸಾಬೀತು ಪಡಿಸಬೇಕಾದರೆ ಸಾವಿರಾರು ಸಾಕ್ಷ್ಯಗಳ ಅಗತ್ಯ ಬೇಕಾಗುತ್ತದೆ ಎಂದು ಅವರು ತಿಳಿಸಿದರು. ಸಂವಾದ ಕಾರ್ಯಕ್ರಮದಲ್ಲಿ ಸಾಹಿತಿ ಕು.ಗೋ., ಡಾ.ಮಾಧವಿ ಭಂಡಾರಿ, ಲಕ್ಷ್ಮೀನಾರಾಯಣ ಭಟ್ ಭಾಗವಹಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ರಂಗಭೂಮಿ ಗೌರವಾಧ್ಯಕ್ಷ ಡಾ.ಎಚ್.ಶಾಂತರಾಮ್ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್, ತಲ್ಲೂರೂ ಫ್ಯಾಮಿಲಿ ಟ್ರಸ್ಟ್ನ ಗಿರಿಜಾ ತಲ್ಲೂರು ಉಪಸ್ಥಿತರಿದ್ದರು.

ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಕಾರ್ಯಕ್ರಮ ನಿರೂಪಿಸಿದರು.ಬಳಿಕ ಹಾವೇರಿ ಶೇಷಗಿರಿಯ ಶ್ರೀ ಗಜಾನನ ಯುವಕ ಮಂಡಲದಿಂದ ವಾಲಿವಧೆ ನಾಟಕ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News