ಕರ್ನಾಟಕದ ಮೂಲಕ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಮುಕ್ತ ಅಭಿಯಾನ ಆರಂಭ-ಡಾ. ಮಹೇಂದ್ರ ಸಿಂಗ್

Update: 2018-04-22 15:24 GMT

ಪುತ್ತೂರು, ಎ. 22: ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣವೇ ಬಿಜೆಪಿಯ ಮುಖ್ಯ ಗುರಿಯಾಗಿದ್ದು, ಉತ್ತರದ ರಾಜ್ಯಗಳು ಈಗಾಗಲೇ ಕಾಂಗ್ರೆಸ್ ಮುಕ್ತವಾಗಿದೆ. ಕರ್ನಾಟಕ ರಾಜ್ಯದ ಮೂಲಕ ದಕ್ಷಿಣ ರಾಜ್ಯಗಳಲ್ಲಿ ಕಾಂಗ್ರೆಸ್ ಮುಕ್ತ ರಾಜಕೀಯ ಆಭಿಯಾನ ಆರಂಭಿಸಲಾಗಿದೆ ಎಂದು ಉತ್ತರ ಪ್ರದೇಶ ಗ್ರಾಮೀಣಾಭಿವೃದ್ಧಿ ಸಚಿವ ಹಾಗೂ ಕರಾವಳಿ ಕರ್ನಾಟಕದ ಬಿಜೆಪಿ ಉಸ್ತುವಾರಿ ಡಾ. ಮಹೇಂದ್ರ ಸಿಂಗ್ ಹೇಳಿದರು.

ಅವರು ರವಿವಾರ ಸಂಜೆ ಪುತ್ತೂರಿನ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಬಿಜೆಪಿ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವ ಈ ದೇಶದ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರು ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಎಂಬ ಘೋಷಣೆಯ ಮೂಲಕ ದೇಶದ ಒಳಿತಿಗಾಗಿ ಶ್ರಮಿಸುತ್ತಿದ್ದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಅಪ್ನ ವಿಕಾಸ್ ಬಾಕಿ ಸಬ್‌ಕಾ ವಿನಾಶ್ ಎಂದು ಕೆಲಸ ಮಾಡುತ್ತಿದೆ ಎಂದು ಲೇವಡಿ ಮಾಡಿದ ಅವರು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬೂತ್ ಮಟ್ಟದಿಂದಲೇ ಬಿಜೆಪಿಯ ವಿಜಯ ಪತಾಕೆ ಹಾರಬೇಕು. ಈ ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದರು.

ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ರುಕ್ಮಯ್ಯ ಪೂಜಾರಿ, ಈ ಬಾರಿಯ ಚುನಾವಣೆಯನ್ನು ಉತ್ಸಾಹದ ರೀತಿಯಲ್ಲಿ ಆಚರಿಸಲು ಬಿಜೆಪಿ ಕಾರ್ಯಕರ್ತರು ತೀರ್ಮಾನ ಮಾಡಿದ್ದಾರೆ. ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ ಆಡಳಿತ ಮಾಡಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ಆಡಳಿತ ವಿರೋಧಿ ಅಲೆ ದ.ಕ. ಜಿಲ್ಲೆಯಲ್ಲಿ ವ್ಯಾಪಕವಾಗಿದ್ದು, ಬಿಜೆಪಿಗೆ ಪೂರಕವಾಗಿದೆ. ಈ ಮೂಲಕ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಜಯಗಳಿಸುವ ವಿಶ್ವಾಸವಿದೆ ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ಜಿಲ್ಲೆಯಲ್ಲಿ ನಡೆದಿರುವ ಅಮಾಯಕ ಯುವಕರ ಹತ್ಯೆಗೆ ಉತ್ತರ ಸಿಗಬೇಕು. ಗೋವುಗಳನ್ನು ತಲವಾರು ತೋರಿಸಿ ದರೋಡೆಗೈದ ಘಟನೆಗಳಿಗೆ ಕಾಂಗ್ರೆಸ್ ಉತ್ತರಿಸಬೇಕು. ಕಾಂಗ್ರೆಸ್ ಈ ಪ್ರಶ್ನೆಗೆ ಉತ್ತರ ನೀಡಿಲ್ಲ. ಪುತ್ತೂರು ವಿಧಾನಸಭಾ ಕ್ಷೇತ್ರದ ಮತದಾರರು ಬಿಜೆಪಿಯ ಪರ ಮತ ಚಲಾಯಿಸುವ ಮೂಲಕ ಉತ್ತರ ನೀಡಬೇಕು. ರಾಜಕೀಯ ಬದಲಾವಣೆಯಾಗಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಸೇರ್ಪಡೆಗೊಂಡ ಪುತ್ತೂರಿನ ಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕಡಮಜಲು ಸುಭಾಷ್ ರೈ, ಮಾಜಿ ನಗರಸಭಾ ಸದಸ್ಯೆ ದೀಕ್ಷಾ ಪೈ ಮತ್ತು ಉದ್ಯಮಿ ಮುಹಮ್ಮದ್ ರಫೀಕ್ ಅವರನ್ನು ಸಚಿವ ಡಾ. ಮಹೇಂದ್ರಸಿಂಗ್ ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಸ್ವಾಗತಿಸಿದರು. ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು, ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಚುನಾವಣಾ ಸಮಿತಿ ಪ್ರಮುಖ್ ಗೋಪಾಲಕೃಷ್ಣ ಹೇರಳೆ, ಬಿಜೆಪಿ ಮಂಡಲ ಚುನಾವಣಾ ಉಸ್ತುವಾರಿ ಕೃಷ್ಣ ಶೆಟ್ಟಿ ಕಡಬ, ಕ್ಷೇತ್ರ ಉಸ್ತುವಾರಿ ರವಿಶಂಕರ ಮಿಜಾರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬೃಜೇಶ್ ಚೌಟ, ಪುತ್ತೂರು ನಗರಸಭೆ ಉಪಾಧ್ಯಕ್ಷ ಬಿ. ವಿಶ್ವನಾಥ ಗೌಡ, ಕೃಷ್ಣಪ್ಪ ಪೂಜಾರಿ ಉಪಸ್ಥಿತರಿದ್ದರು.

ಪುತ್ತೂರು ನಗರಮಂಡಲ ಬಿಜೆಪಿ ಅಧ್ಯಕ್ಷ ಕೆ. ಜೀವಂಧರ್ ಜೈನ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರಾಮದಾಸ್ ಹಾರಾಡಿ ವಂದಿಸಿದರು. ನಗರಸಭಾ ಸದಸ್ಯ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News