2019ರಿಂದ ವಾಹನಗಳಿಗೆ ವಿರೂಪ ತಡೆ, ಅತ್ಯುಚ್ಚ ಭದ್ರತೆಯ ನೋಂದಣಿ ಫಲಕ

Update: 2018-04-22 17:46 GMT

ಹೊಸದಿಲ್ಲಿ, ಎ. 22: 2019 ಜನವರಿ 1ರಿಂದ ಎಲ್ಲ ಮೋಟಾರು ವಾಹನಗಳಿಗೆ ಹಲವು ಭದ್ರತಾ ಲಕ್ಷಣಗಳೊಂದಿಗೆ ವಿರೂಪ ತಡೆ, ಅತ್ಯುಚ್ಚ ಭದ್ರತೆಯ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸಲಾಗುವುದು ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಕರಡು ಅಧಿಸೂಚನೆ ತಿಳಿಸಿದೆ.

ಕೇಂದ್ರ ಸರಕಾರ ಎಚ್‌ಎಸ್‌ಆರ್‌ಪಿಯನ್ನು ಕಡ್ಡಾಯಗೊಳಿಸಿದ ಹೊರತಾಗಿಯೂ ಅನೇಕ ರಾಜ್ಯಗಳು ಇದುವರೆಗೆ ಅನುಷ್ಠಾನಗೊಳಿಸಿಲ್ಲ. ಈ ಹಿನ್ನೆಲೆಯಲ್ಲಿ ಇದು ಮಹತ್ವದ ಬೆಳವಣಿಗೆಯಾಗಲಿದೆ. ‘‘2019 ಜನವರಿ 1ರಂದು ಹಾಗೂ ಅನಂತರ ಉತ್ಪಾದಿಸಲಾದ ವಾಹನಗಳೊಂದಿಗೆ ವಾಹನದ ಉತ್ಪಾದಕರು ಮೂರನೇ ನೋಂದಣಿ ಗುರುತು ಒಳಗೊಂಡಿರುವ ಭದ್ರತಾ ಪರವಾನಿಗೆ ಫಲಕಗಳನ್ನು ಅಗತ್ಯವಿರುವಲ್ಲಿಗೆ ಪೂರೈಸಲಿದ್ದಾರೆ. ಮಾರಾಟಗಾರರು ನೋಂದಣಿ ಗುರುತನ್ನು ಅಂತಹ ಫಲಕಗಳಲ್ಲಿ ಮುದ್ರಿಸಲಿದ್ದಾರೆ ಹಾಗೂ ಅದನ್ನು ವಾಹನಗಳಿಗೆ ಅಳವಡಿಸಲಿದ್ದಾರೆ’’ ಎಂದು ಅಧಿಸೂಚನೆ ತಿಳಿಸಿದೆ. ನೋಂದಣಿ ಗುರುತು ನೀಡಿದ ಬಳಿಕ ಮಾರಾಟಗಾರರು ವಾಹನ ಉತ್ಪಾದಕರು ಪೂರೈಸಿದ ಇಂತಹ ಫಲಕಗಳನ್ನು ಹಳೆಯ ವಾಹನಗಳಿಗೆ ಕೂಡ ಅಳವಡಿಸಬಹುದು ಎಂದು ಅದು ಹೇಳಿದೆ.

ಮೋಟಾರು ವಾಹನಗಳಿಗೆ ಎಚ್‌ಎಸ್‌ಆರ್‌ಪಿಗಳನ್ನು ಅಳವಡಿಸುವುದಕ್ಕೆ ಸಂಬಂಧಿಸಿ ಕೇಂದ್ರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರುವ ಪ್ರಕ್ರಿಯೆಯಲ್ಲಿ ತೊಡಗಲಾಗಿದೆ. ಈ ಸಂಬಂಧ ಸಾರ್ವಜನಿಕರು ಹಾಗೂ ಶೇರುದಾರರಿಂದ ಮೇ 10ರ ಒಳಗೆ ಸಲ್ಲಿಕೆಯಾಗುವಂತೆ ಅಭಿಪ್ರಾಯ ಆಹ್ವಾನಿಸದ್ದೇವೆ ಎಂದು ಸಚಿವಾಲಯ ಹೇಳಿದೆ. ಈ ತಿಂಗಳ ಆರಂಭದಲ್ಲಿ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ, ವಾಹನಗಳಿಗೆ ಇಂತಹ ನಂಬರ್ ಪ್ಲೇಟ್‌ಗಳನ್ನು ಅಳವಡಿಸುವ ಪ್ರಕ್ರಿಯೆ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ಹೇಳಿದ್ದರು. ಪ್ರಸ್ತುತ ವಾಹನಗಳಿಗೆ ಅಳವಡಿಸುವ ವಾಹನ ಪರವಾನಿಗೆ ಫಲಕ ಅಧೀಕೃತ ನೋಂದಣಿ ಸಂಖ್ಯೆ ಹೊಂದಿದೆ. ಇದನ್ನು ಸಾಮಾನ್ಯವಾಗಿ ನಂಬರ್ ಪ್ಲೇಟ್ ಎಂದು ಕರೆಯಲಾಗುತ್ತದೆ. ವಿವಿಧ ರಾಜ್ಯಗಳು ಇದನ್ನು ಪ್ರತ್ಯೇಕವಾಗಿ ನಿಯೋಜಿತ ಏಜೆನ್ಸಿ ಮೂಲಕ ಹೊಂದುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News