ಬಿಜೆಪಿ ಸೇರ್ಪಡೆ ಕುರಿತ ಅಪಪ್ರಚಾರಕ್ಕೆ ಇಂದು ತೆರೆ: ಮಧ್ವರಾಜ್

Update: 2018-04-23 09:54 GMT

ಉಡುಪಿ, ಎ.23: ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಸೋಮವಾರ ನಾಮಪತ್ರವನ್ನು ಸಲ್ಲಿಸಿದರು.

ಸಚಿವ ಪ್ರಮೋದ್ ಮಧ್ವರಾಜ್ ಬ್ರಹ್ಮಗಿರಿಯ ಕಾಂಗ್ರೆಸ್ ಭವನಕ್ಕೆ ತೆರಳಿ ತನ್ನ ತಾಯಿ ಮನೋರಮಾ ಮಧ್ವರಾಜ್ ಜೊತೆಗೂಡಿ ಚುನಾವಣಾ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ವಿಜಯ ಹೆಗ್ಡೆ, ವರೋನಿಕಾ ಕರ್ನೆಲಿಯೋ ಹಾಜರಿದ್ದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಮೋದ್ ಮಧ್ವರಾಜ್, ತಾಯಿ ಹಾಗೂ ಕಾರ್ಯಕರ್ತರ ಆಶೀರ್ವಾದ ಪಡೆದು ನಾಮಪತ್ರ ಸಲ್ಲಿಸಿದ್ದೇನೆ. ಈ ಮೂಲಕ ನಾನು ಬೇರೆ ಪಕ್ಷಕ್ಕೆ ಹೋಗುತ್ತೇನೆ ಎಂಬ ಅಪಪ್ರಚಾರಕ್ಕೆ ಇಂದು ತೆರೆ ಬಿತ್ತೆಂದು ಎನಿಸುತ್ತೇನೆ ಎಂದರು. ವಾಪಾಸ್ಸು ಪಡೆಯಲು ಇನ್ನು ಕೂಡ ಕಾಲಾವಕಾಶ ಇದೆಯಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ, ಇನ್ನೂ ಕೂಡ ನಿಮಗೆ ಸಂಶಯ ಇದ್ದರೆ ನಾನು ಏನು ಮಾಡಲು ಆಗುವುದಿಲ್ಲ ಎಂದು ಪ್ರತಿ ಕ್ರಿಯಿಸಿದರು.

ನನ್ನ ಸೇವೆ, ಸರಕಾರದ ಅಭಿವೃದ್ಧಿ ಕೆಲಸಗಳನ್ನು ನೋಡಿ ಕ್ಷೇತ್ರದ ಜನತೆ ನನಗೆ ಸಂಪೂರ್ಣ ಬೆಂಬಲ ನೀಡಿ ನನ್ನನ್ನು ಗೆಲ್ಲಿಸುತ್ತಾರೆ ಎಂಬ ಪೂರ್ಣ ವಿಶ್ವಾಸ ಇದೆ. ಎದುರಾಳಿಗಳು ನಮಗೆ ಪ್ರಬಲ ಪೈಪೋಟಿ ನೀಡುವುದು ಅವರ ಧರ್ಮ. ಹಾಗಾಗಿ ನಾವು ಯಾವುದೇ ಚುನಾವಣೆಯನ್ನು ಲಘುವಾಗಿ ಪರಿಗಣಿಸುವುದಿಲ್ಲ. ನಮ್ಮ ಪ್ರಥಮ ವೈರಿ ಅತಿಯಾದ ಆತ್ಮವಿಶ್ವಾಸ, ದ್ವಿತೀಯ ವೈರಿ ನಮ್ಮ ಎದುರಾಳಿ. ಆದುದರಿಂದ ಯಾರು ಕೂಡ ಅತಿಯಾದ ಆತ್ಮವಿಶ್ವಾಸ ಹೊಂದದೆ ಜನರ ಮನವೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News