ಪ್ರಮೋದ್ ನಾಮಪತ್ರ ಸಲ್ಲಿಸಲು ತಾಯಿ ಮನೋರಮಾರನ್ನು ಕರೆದೊಯ್ದ ರಹಸ್ಯ ಏನು ಗೊತ್ತೆ ?

Update: 2018-04-23 10:46 GMT

ಉಡುಪಿ, ಎ. 23: ನಾಮಪತ್ರ ಸಲ್ಲಿಸಲು ಚುನಾವಣಾ ಕಚೇರಿಗೆ ಆಗಮಿಸಿದ ಸಚಿವ ಪ್ರಮೋದ್ ಮಧ್ವರಾಜ್, ಅಚ್ಚರಿಯ ಬೆಳವಣಿಗೆ ಎಂಬಂತೆ ತನ್ನ ಜೊತೆ ತಾಯಿ, ಮಾಜಿ ಸಚಿವೆ ಮನೋರಮಾ ಮಧ್ವರಾಜ್ ಅವರನ್ನು ಕರೆದುಕೊಂಡು ಬಂದಿದ್ದು, ಅವರನ್ನು ಬಳಿಯಲ್ಲಿ ಇರಿಸಿಕೊಂಡೆ ನಾಮಪತ್ರವನ್ನು ಸಲ್ಲಿಸಿದರು.

ಬೆಳಗ್ಗೆ ಕೊಳಲಗಿರಿಯ ತಮ್ಮ ನಿವಾಸ ಹಾಗೂ ಹೆಜಮಾಡಿಯಲ್ಲಿರುವ ಮೂಲಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ ಪ್ರಮೋದ್ ಮಧ್ವರಾಜ್, ಬಳಿಕ ಮಲ್ಪೆಯಲ್ಲಿರುವ ತಂದೆ ಮಧ್ವರಾಜ್ ಸಮಾಧಿಗೆ ಭೇಟಿ ನೀಡಿ, ಗೌವರ ಸಲ್ಲಿಸಿದರು. ಅಲ್ಲಿಂದ ತನ್ನ ತಾಯಿ ಜೊತೆಗೂಡಿ ಆಗಮಿಸಿ ಅವರ ಸಮ್ಮುಖದಲ್ಲೇ ನಾಮಪತ್ರವನ್ನು ಸಲ್ಲಿಸಿದರು.

‘ಇಂದು ಪುಷ್ಯ ನಕ್ಷತ್ರ. ಅದೇ ರೀತಿ ನನ್ನ ತಾಯಿಯದ್ದು ಕೂಡ ಪುಷ್ಯ ನಕ್ಷತ್ರ. ನಾನು ಪುಷ್ಯ ನಕ್ಷತ್ರದಂದು ನಾಮಪತ್ರ ಸಲ್ಲಿಸುವುದರಿಂದ ಅದೇ ನಕ್ಷತ್ರ ಹೊಂದಿರುವ ತಾಯಿಯಿಂದ ಒಳ್ಳೆಯ ಆಶೀರ್ವಾದ ಆಗಬಹುದೆಂದು ಅವರಲ್ಲಿ ವಿನಂತಿ ಮಾಡಿ, ಕರೆದುಕೊಂಡು ಬಂದಿದ್ದೇನೆ. ತಾಯಿ ಈಗಾಗಲೇ ಬಿಜೆಪಿಗೆ ರಾಜೀನಾಮೆ ನೀಡಿ ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ’ ಎಂದು ಪ್ರಮೋದ್ ಮಧ್ವರಾಜ್ ತಿಳಿಸಿದರು.

‘ನಮ್ಮ ಕುಟುಂಬ ಈ ಸ್ಥಾನದಲ್ಲಿರುವ ಮತ್ತು ನಮ್ಮ ಹೆಸರು ಒಳ್ಳೆಯ ರೀತಿಯಲ್ಲಿ ಇರಲು ನನ್ನ ತಂದೆ ಮಧ್ವರಾಜ್ ಕಾರಣ. ಅವರ ಪರೋಪಕಾರ ಹಾಗೂ ದಾನಧರ್ಮದ ಗುಣ ಎಲ್ಲರು ಕೂಡ ಗೌರವಿಸುವಂತದ್ದು. ಹಾಗಾಗಿ ತಂದೆಯ ಸಮಾಧಿಗೆ ಭೇಟಿ ಕೊಟ್ಟು ಅವರ ಆತ್ಮದ ಆಶೀರ್ವಾದ ಪಡೆದು ಕೊಂಡು ಬಂದಿದೇನೆ’ ಎಂದು ಪ್ರಮೋದ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News