ಕಥುವಾ ಬಾಲಕಿಯ ಅತ್ಯಾಚಾರ, ಕೊಲೆ: ಅಡ್ಡೂರು ನಾಗರಿಕ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ

Update: 2018-04-23 11:28 GMT

ಮಂಗಳೂರು, ಎ. 23: ಕುಥುವಾ ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ನಡೆಸಿರುವುದನ್ನು ಖಂಡಿಸಿ ಅಡ್ಡೂರು ನಾಗರಿಕ ಹೋರಾಟ ಸಮಿತಿ ವತಿಯಿಂದ ಎಫ್ ಸಿಕೆ ಕೆಳಗಿನಕರೆ ಸಹಯೋಗದಲ್ಲಿ ರವಿವಾರ ನಗರದ ಹೊರವಲಯದ ಅಡ್ಡೂರಿನಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಗೊಳಿಸಿ ಬೃಹತ್ ಪ್ರತಿಭಟನೆ ನಡೆಯಿತು.

ಈ ವೇಳೆ ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಚೊಕ್ಕಬೆಟ್ಟು ಜುಮಾ ಮಸೀದಿ ಖತೀಬ್ ಅಝೀಝ್ ದಾರಿಮಿ, ಪ್ರಧಾನಿ ನರೇಂದ್ರ ಮೋದಿ ಪೊರಕೆ ಇಡಿದು ಸ್ವಚ್ಛ ಅಭಿಯಾನ ಕೈಗೊಂಡರೆ ದೇಶ ನಿರ್ಮಲವಾಗುವುದಿಲ್ಲ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಜಾರಿಗೊಳಿಸಿದಾಗ ಮಾತ್ರ ಈ ದೇಶ ಸ್ವಚ್ಛ, ನಿರ್ಮಲವಾಗಲು ಸಾಧ್ಯ ಎಂದು ಹೇಳಿದರು.

ದೇಶದಲ್ಲಿ ದುಷ್ಟ ಶಕ್ತಿಗಳು ಬೆಳೆಯುತ್ತಿದ್ದು, ಇದನ್ನು ಸಂಹಾರ ಮಾಡಲು ನಾಗರಿಕರಲ್ಲಿ ಪ್ರಜ್ಞಾವಂತಿಕೆ ಅನಿವಾರ್ಯವಾಗಿದೆ. ದೇಶದ ನಾಗರಿಕರು ಜಾತಿ-ಭೇದ ಮರೆತು ತಮ್ಮ ಮಕ್ಕಳಿಗೆ ಕುಥುವಾದ ಸಂತ್ರಸ್ತೆ ಬಾಲಕಿಯ ಹೆಸರನ್ನು ನಾಮಕರಣಗೊಳಿಸುವುದು ಮತಾಂತರ ಅಲ್ಲ. ಅದು ಮನಸಾಂತರ ಎಂದವರು, ದೇಶಕ್ಕೆ ಅಚ್ಛೇದಿನ್ ಬದಲು ಅತ್ಯಾಚಾರ ದಿನ ಬಂದೊದಗಿದೆ ಎಂದು ಟೀಕಿಸಿದರು.

ದೇಶದಲ್ಲಿ ನಡಯತ್ತಿರುವ ಅತ್ಯಾಚಾರ ಪ್ರಕರಣದ ಬಗ್ಗೆ ಸಮರ್ಥಿಸಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಸಂತೋಷ್ ಗಂಗ್ವಾರ್ ನನ್ನು ನರೇಂದ್ರ ಮೋದಿಯವನ್ನು ಸಂಪುಟದಿಂದ ಕಿತ್ತೊಗೆಯಬೇಕು ಹಾಗೂ ಕುಥುವಾ ಪ್ರಕರಣದ ಅಪರಾಧಿಗಳಿಗೆ ಗುಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಸಾಮಾಜಿಕ ಕಾರ್ಯಕರ್ತ ಇಕ್ಬಾಲ್ ಬಾಳಿಲ ಮಾತನಾಡಿ, ಹನ್ನೆರಡು ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಅತ್ಯಾಚಾರ ಎಸಗುವ ಅಪರಾಧಿಗಳಿಗೆ ಕಠಿಣ ಶಿಕ್ಷೆ ಸೇರಿದಂತೆ ಮರಣದಂಡನೆ ವಿಧಿಸುವ ಸುಗ್ರಿವಾಜ್ಞೆಯಲ್ಲಿ ಮಹಿಳೆಯರಿಗೆ ನ್ಯಾಯ ಒದಗಿಸಬೇಕು. ಈ ನಿಟ್ಟಿನಲ್ಲಿ ಯಾವುದೇ ಅತ್ಯಾಚಾರಿಗೂ ಮರಣ ದಂಡನೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಹೈದರ್ ದಾರಿಮಿ, ಮಜೀದ್ ದಾರಿಮಿ, ಉಪನ್ಯಾಸಕ ಎಂ.ಎ.ಮುಹಮ್ಮದ್ ಕುಂಞಿ, ಅಡ್ಡೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಶರೀಫ್ ದಾರಿಮಿ, ಎಫ್ ಸಿಕೆ ಅಧ್ಯಕ್ಷ ಫರ್ವೀಝ್, ಸಮಾಜಿಕ ಕಾರ್ಯಕರ್ತ ಯು.ಪಿ. ಇಬ್ರಾಹೀಂ, ಎಸ್ಕೆಸ್ಸೆಸೆಫ್ ಕ್ಲಸ್ಟರ್ ಅಧ್ಯಕ್ಷ ಬಾತೀಶ್ ಸಾಗರ್, ಎಸ್ ವೈಎಸ್ ವಲಯಾಧ್ಯಕ್ಷ ಅಬ್ದುಲ್ ರಹಿಮಾನ್,  ಹಕೀಂ ಪಾಂಡೇಲ್ ಮತ್ತಿತರರು ಉಪಸ್ಥಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News