ಈದ್ಗಾ ಪ್ರಕರಣದಲ್ಲಿ ಮುಂಚೂಣಿಯಲ್ಲಿದ್ದ ಅನಂತ್ ಕುಮಾರ್ ಹೆಗಡೆ ಕೇಂದ್ರ ಸಚಿವ, ಜೊತೆಗಿದ್ದ ಸತ್ಯಜಿತ್ ಗಿಲ್ಲ ಟಿಕೆಟ್!

Update: 2018-04-23 16:57 GMT

ಮಂಗಳೂರು, ಎ.23: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು. ಟಿಕೆಟ್ ವಂಚಿತರಾದ  ಹಿಂದುಳಿದ ವರ್ಗದ (ಬಿಲ್ಲವ) ಸತ್ಯಜಿತ್ ಸುರತ್ಕಲ್ ಈಗಾಗಲೇ ನಿರ್ಧಾರ ಪ್ರಕಟಿಸುವ ಬಗ್ಗೆ ಬಿಜೆಪಿಗೆ ಗಡುವು ನೀಡಿದ್ದಾರೆ.

ಈಗಾಗಲೇ ಇದೇ ವಿಷಯಕ್ಕೆ ಸಂಬಂಧಿಸಿ ಬಿಜೆಪಿ ನಾಯಕರು ಹಾಗು ಸತ್ಯಜಿತ್ ನಡುವೆ ಮಾತುಕತೆ ನಡೆದರೂ ಫಲಪ್ರದವಾಗಿಲ್ಲ. ತಾನು 35 ವರ್ಷಗಳಿಂದ ಪಕ್ಷ ಹಾಗು ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಪ್ರಬಲ ಟಿಕೆಟ್ ಆಕಾಂಕ್ಷಿಯೂ ಆಗಿದ್ದೆ. ಟಿಕೆಟ್ ಕೈತಪ್ಪಿದ್ದರಿಂದ ನನ್ನ ಮನಸ್ಸಿಗೆ ನೋವಾಗಿದೆ. ತನಗೆ ಟಿಕೆಟ್ ಕೈತಪ್ಪಲು ಸಂಸದ ನಳಿನ್ ಕುಮಾರ್ ಕಟೀಲು ಹಾಗು ಆರೆಸ್ಸೆಸ್ ಪ್ರಾಂತ ಪ್ರಮುಖ್ ಪಿ.ಎಸ್. ಪ್ರಕಾಶ್ ಕಾರಣರು ಎಂದು ಸತ್ಯಜಿತ್ ಆರೋಪಿಸಿದ್ದರು. ಸದ್ಯ ಮಾತುಕತೆ ಫಲಪ್ರದವಾಗಿಲ್ಲ ಹಾಗು ಬಿಜೆಪಿಯು ಹಿಂದುಳಿದ ವರ್ಗದವರನ್ನು ಕಡೆಗಣಿಸಿ ಮೇಲ್ವರ್ಗದವರಿಗೆ ಮಣೆ ಹಾಕುತ್ತಿದೆ ಎನ್ನುವ ಆರೋಪಗಳೂ ಕೇಳಿ ಬಂದಿವೆ.

ಈ ಆರೋಪಕ್ಕೆ ಪ್ರಮುಖ ಕಾರಣ ಹಲವು ವರ್ಷಗಳ ಹಿಂದಿನ ಹುಬ್ಬಳ್ಳಿ ಈದ್ಗಾ ಪ್ರಕರಣ. ಈ ಪ್ರಕರಣದಲ್ಲಿ ಈಗಿನ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಜೊತೆ ಮುಂಚೂಣಿಯಲ್ಲಿದ್ದವರು ಇದೇ ಸತ್ಯಜಿತ್ ಸುರತ್ಕಲ್. ಆದರೆ ಅನಂತ್ ಕುಮಾರ್ ಹೆಗಡೆ ಕೇಂದ್ರ ಸಚಿವರಾಗಿದ್ದರೆ ಹಿಂದುಳಿದ ವರ್ಗದ ಸತ್ಯಜಿತ್ ರಿಗೆ ಬಿಜೆಪಿ ಟಿಕೆಟ್ ಕೂಡ ನೀಡಿಲ್ಲ. ಇದು ಬಿಜೆಪಿಯ ಹಿಂದುಳಿದ ವರ್ಗದವರೊಂದಿಗಿನ ತಾರತಮ್ಯ ನೀತಿ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಕರ್ಫ್ಯೂ ನಡುವೆಯೂ ಹುಬ್ಬಳ್ಳಿಯ ವಿವಾದಾತ್ಮಕ ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಘಟನೆ ಅನಂತ್ ಕುಮಾರ್ ಹೆಗಡೆ ರಾಜಕೀಯ ಪ್ರವೇಶಕ್ಕೆ ನಾಂದಿಯಾಯಿತು. ಇದೇ ಪ್ರಕರಣದಲ್ಲಿ ಸತ್ಯಜಿತ್ ಅನಂತ್ ಕುಮಾರ್ ಹೆಗಡೆ ಜೊತೆಗೇ ಇದ್ದರು. ಈ ಪ್ರಕರಣದ ನಂತರ 1996ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅನಂತ್ ಕುಮಾರ್ ಹೆಗಡೆಯವರಿಗೆ ಟಿಕೆಟ್ ನೀಡಲಾಗಿದ್ದು, 1998ನ್ನು ಹೊರತುಪಡಿಸಿ ಅವರು ಕಾರವಾರಲ್ಲಿ ಜಯ ಗಳಿಸುತ್ತಲೇ ಬಂದಿದ್ದಾರೆ. ಇದೀಗ ಅವರು ಕೇಂದ್ರ ಸಚಿವರೂ ಆಗಿದ್ದಾರೆ.

ರಾಜಕೀಯದಲ್ಲಿ ಅನಂತ್ ಕುಮಾರ್ ಹೆಗಡೆಯವರಿಗೆ ಸಿಕ್ಕ ಅವಕಾಶ ಹಾಗು ಬೆಳವಣಿಗೆಯನ್ನು ಗಮನಿಸುವುದಾದರೆ ಸತ್ಯಜಿತ್ ಇನ್ನೂ ಟಿಕೆಟ್ ಪಡೆಯಲೂ ಹೋರಾಟ ಮಾಡುವಂತಾಗಿದೆ. ಬಿಜೆಪಿಯು ಮೇಲ್ವರ್ಗದ ಜನರಿಗೆ ಮಣೆ ಹಾಕಿ ಹಿಂದುಳಿದ ವರ್ಗದ ಜನರನ್ನು ಕಡೆಗಣಿಸುತ್ತಿದೆ. ರಾಜಕೀಯ ಲಾಭಕ್ಕಾಗಿ ಮಾತ್ರ ಅವರನ್ನು ಬಳಸಿಕೊಳ್ಳುತ್ತಿದೆ ಎನ್ನುವ ಆರೋಪಗಳು ಈ ಮೂಲಕ ನಿಜವಾಗಿದೆ ಎನ್ನುವುದು ನಾಗರಿಕರ ಅಭಿಪ್ರಾಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News