ದ್ವೇಷದ ರಾಜಕಾರಣ ಕೈಬಿಡಿ, ದೇಶದ ಕಟ್ಟಲು ರಾಜಕಾರಣ ಮಾಡಬೇಕು: ರಾಜ್‌ನಾಥ್ ಸಿಂಗ್

Update: 2018-04-23 17:34 GMT

ಕಾರ್ಕಳ, ಎ. 23: ಸರಕಾರ ರಚಿಸಲು ದ್ವೇಷದ ರಾಜಕಾರಣ ಕೈಬಿಟ್ಟು ದೇಶ ಕಟ್ಟಲು ಪ್ರಾಮಾಣಿಕ ರಾಜಕಾರಣ ಮಾಡಬೇಕಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟರು.

ಅವರು ಕಾರ್ಕಳ ಬಿಜೆಪಿ ಅಭ್ಯರ್ಥಿ ಸುನಿಲ್‌ ಕುಮಾರ್ ನಾಮಪತ್ರ ಸಲ್ಲಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಜನರ ಹಿತವನ್ನು ಸಂಪೂರ್ಣ ಮರೆತಿದ್ದು, ರಾಜ್ಯದಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ನಿಷ್ಠಾವಂತ ಅಧಿಕಾರಿಗಳಿಗೆ ರಕ್ಷಣೆಯಿಲ್ಲದಂತಾಗಿದೆ. ರಾಜ್ಯ ರಾಜಕಾರಣದಲ್ಲಿ ರಾಜಕೀಯ ಹಿಂಸೆಗಳು ವಿಪರೀತ ಹೆಚ್ಚಳವಾಗಿದ್ದು ಪರಿಣಾಮವಾಗಿ ಹಿಂದೂ ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿದೆ ಎಂದರು. ಸಿದ್ದರಾಮಯ್ಯ ಅಭಿವೃದ್ಧಿಯಲ್ಲಿ ಸದಾಸಿದ್ಧ ಸರಕಾರವೆಂದು ಹೇಳಿಕೊಳ್ಳುತ್ತಿದ್ದಾರೆ ಆದರೆ ಅವರದ್ದು ಸದಾ ನಿದ್ದೆ ಸರಕಾರವಾಗಿದೆ ಎಂದು ಲೇವಡಿ ಮಾಡಿದರು.

ಕೇಂದ್ರ ಸರಕಾರ ರೈತರಿಗೆ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದ್ದು ಫಸಲ್‌ಭೀಮಾ ಯೋಜನೆ , ರೈತರಿಗೆ ಬೆಳೆವಿಮೆ ಅಲ್ಲದೇ ದೇಶದ ಸಮಸ್ತ ನಾಗರಿಕರಿಗೆ 5 ಲಕ್ಷ ವರೆಗಿನ ವೈದ್ಯಕೀಯ ವೆಚ್ಚವನ್ನು ಸರಕಾರ ಭರಿಸಲಿದ್ದು ಇಂತಹ ಯೋಜನೆಗಳಿಂದ ಕೋಟ್ಯಾಂತರ ಬಡವರಿಗೆ ವರದಾನವಾಗಿದೆ ಎಂದರು. ಕಾಂಗ್ರೆಸ್ ಜಾತಿ,ಧರ್ಮಗಳನ್ನು ಒಡೆಯುವ ಮೂಲಕ ಸಮಾಜದ ಸಾಮರಸ್ಯ ಕೆಡಸಲು ಯತ್ನಿಸಿದ್ದು ಇಂತಹ ಸರಕಾರವನ್ನು ಕಿತ್ತೊಗೆಯ ಬೇಕೆಂದು ಕರೆ ನೀಡಿದರು.

ಹನುಮ ಜಯಂತಿ ಏಕೆ ಇಲ್ಲ ?

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ವಿವಿಧ ಜಯಂತಿ ಆಚರಿಸುವ ಮೂಲಕ ಧರ್ಮ-ಜಾತಿ ಒಡೆಯುವ ಕೆಲಸ ಮಾಡಿದೆ. ಎಲ್ಲಾ ಜಯಂತಿ ಆಚರಣೆ ನಡುವೆ ಹನುಮ ಜಯಂತಿ ಏಕೆ ಆಚರಿಸಿಲ್ಲ ? ಎಂದು ಪ್ರಶ್ನಿಸಿದರು.

ಓಟು ಹಾಕುವ ಮೂಲಕ ನಮ್ಮ ಹೋರಾಟವನ್ನು ನಡೆಸೋಣ ಈ ಬಾರಿ ಯಡಿಯೂರಪ್ಪ ನೇತೃತ್ವದಲ್ಲಿ ಸರಕಾರ ರಚನೆ ಮಾಡುವ ಮೂಲಕ ದೇಶವನ್ನು ಅಭಿವೃದ್ದಿ ಪಥದತ್ತ ಸಾಗಿಸೋಣ. ಕರ್ನಾಟಕವನ್ನು ಮೋಡೆಲ್ ರಾಜ್ಯವನ್ನಾಗಿ ಪರಿವರ್ತಿಸೋಣ ಎಂದರು.

 ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭ ಕರಂದ್ಲಾಜೆ ಮಾತನಾಡಿ, ಇದು ಧರ್ಮ-ಅಧರ್ಮದ, ಸತ್ಯ-ಅಸತ್ಯದ, ಜಾತಿವಾದ-ಸಾಮರಸ್ಯ ನಡುವೆ ನಡೆಯುವ ಚುನಾವಣೆ. ಕಳೆದ ಐದು ವರ್ಷದಲ್ಲಿ ಕಾಂಗ್ರೆಸ್ ಈ ರಾಜ್ಯವನ್ನು ಛಿದ್ರ-ಛಿದ್ರವಾಗಿ ಸಾಮಾಜಿಕವಾಗಿ ಮಾಡಲು ಸಾಧ್ಯವೋ ಅಷ್ಟು ಮಾಡಿದ್ದಾರೆ. ಜಾತಿ, ಧರ್ಮಗಳನ್ನು ಒಡೆಯುವಂತಹ ಷಡ್ಯಂತ್ರ ಮಾಡುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ. ಇಂತಹ ದುರಹಂಕಾರಿ ಮುಖ್ಯ ಮಂತ್ರಿಯನ್ನು ಕಿತ್ತೊಗೆಯಬೇಕು ಎಂದರು.

ಶಾಸಕ, ಬಿಜೆಪಿ ಅಭ್ಯರ್ಥಿ ವಿ.ಸುನಿಲ್ ಕುಮಾರ್ ಮಾತನಾಡಿ, ಕ್ಷೇತ್ರದ ಮತದಾರರು ಯಾವ ನಂಬಿಕೆ ವಿಶ್ವಾಸವಿಟ್ಟು ಕೊಂಡು ನನಗೆ ಮತನೀಡಿದ್ದರೋ ಅವರ ವಿಶ್ವಾಸ ಹಾಗೂ ನಂಬಿಕೆಗೆ ಧಕ್ಕೆ ತರದೆ ಪ್ರಾಮಾಣಿಕವಾಗಿ ಕಾರ್ಕಳದ ಸಮಗ್ರ ಅಭಿವೃದ್ದಿಗಾಗಿ ಶ್ರಮಿಸಿದ್ದೇನೆ. ಹಿಂದೆ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಅಕಾರವಿದ್ದ ಸಂದರ್ಭ ಹಾಗೂ ನನ್ನ ಆಡಳಿತದ ಸಂದರ್ಭದ ಅಭಿವೃದ್ದಿಯನ್ನು ತುಲನೆ ಮಾಡಿ ಮತ ನೀಡಿ ಎಂದರು.

ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಹಿರಿಯ ಮುಖಂಡ ಬೋಳ ಪ್ರಭಾಕರ ಕಾಮತ್, ಎಂ.ಕೆ.ವಿಜಯ ಕುಮಾರ್, ಭಾಸ್ಕರ್ ಕೋಟ್ಯಾನ್, ಪ್ರಚಾರ ಸಮಿತಿ ಅಧ್ಯಕ್ಷ ಮಹೇಶ್ ಶೆಟ್ಟಿ, ಉಡುಪಿ ಬಿಜೆಪಿ ಮುಖಂಡ ಉದಯ ಕುಮಾರ್ ಶೆಟ್ಟಿ, ಕ್ಷೇತ್ರಾಧ್ಯಕ್ಷ ಮಣಿರಾಜ ಶೆಟ್ಟಿ, ಬಿಜೆಪಿ ಪ್ರಮುಖರಾದ ರೇಷ್ಮ ಶೆಟ್ಟಿ, ಸವಿತಾ ಕೋಟ್ಯಾನ್, ಮಹಾವೀರ ಹೆಗ್ಡೆ, ರವೀಂದ್ರ ಕುಮಾರ್, ಸುವೃತ್ ಕುಮಾರ್, ದಯಾನಂದ ಹೆಗ್ಡೆ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರವೀಂದ್ರ ಕುಮಾರ್ ಸ್ವಾಗತಿಸಿದರು, ಸಾಣೂರು ನರಸಿಂಹ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ರೇಶ್ಮ ಉದಯ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News