ನಾಮಪತ್ರ ಸಲ್ಲಿಕೆಯಲ್ಲಿ ಸರ್ವಧರ್ಮ ಸಮನ್ವಯತೆ ಮೆರೆದ ಸೊರಕೆ

Update: 2018-04-23 17:56 GMT

ಉಡುಪಿ, ಎ.23: ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕ ವಿನಯ ಕುಮಾರ್ ಸೊರಕೆ ಇಂದು ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ವಿನಯ್ ಕುಮಾರ್ ಸೊರಕೆ ಸರ್ವಧರ್ಮದ ಮುಖಂಡರನ್ನು ಭೇಟಿ ಮಾಡಿ ದೇವಸ್ಥಾನ, ಚರ್ಚ್, ಮಸೀದಿಯಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. ಮೊದಲು ಮಂಗಳೂರು ಕದ್ರಿ ಮಂಜು ನಾಥೇಶ್ವರ ದೇವರಿಗೆ ಬಳಿಕ ಪಡುಬಿದ್ರಿ ನಾಗ ಬ್ರಹ್ಮಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸೊರಕೆ, ಕಾಪು ಜನಾರ್ದನ ದೇವಸ್ಥಾನ, ಕಾಪು ವಾರಿಗುಡಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಅನಂತರ ಕಾಪು ಪೊಲಿಪು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಅಲ್ಲಿನ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ಹಂಚಿದರು. ಕಟಪಾಡಿ ವಿಶ್ವನಾಥ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದ ಅವರು, ಕಾಪು ವೆಂಕಟರಮಣ ದೇವಸ್ಥಾನಕ್ಕೂ ಭೇಟಿ ನೀಡಿ ದರು. ಬಳಿಕ ಉದ್ಯಾವರ ಚರ್ಚ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸಿ, ಉಡುಪಿ ಬಿಷಪ್‌ರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಅಲ್ಲಿಂದ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಸೊರಕೆ, ಕಾರ್ಯಕರ್ತರೊಂದಿಗೆ ಚುನಾವಣಾ ಕಚೇರಿಗೆ ಆಗಮಿಸಿ ನಾಲ್ಕು ಸೆಟ್‌ಗಳಲ್ಲಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ವಕೀಲ ಪಾಂಗಾಳ ಹರೀಶ್ ಶೆಟ್ಟಿ, ಜಿಪಂ ಸದಸ್ಯ ವಿಲ್ಸನ್ ರೊಡ್ರಿಗಸ್, ಕಾಂಗ್ರೆಸ್ ಮುಖಂಡ ಇಬ್ರಾಹಿಂ ಮನ್‌ಹರ್ ಉಪಸ್ಥಿತರಿದ್ದರು.

ಬಳಿಕ ಮಾತನಾಡಿದ ಸೊರಕೆ, ಈ ಬಾರಿ ಚುನಾವಣಾ ಪ್ರಚಾರಕ್ಕೆ ಕರಾವಳಿ ಜಿಲ್ಲೆಗಳಿಗೆ ಮತ್ತೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಆಗಮಿಸಲಿ ದ್ದಾರೆ. ಈ ವೇಳೆ ಕಾಪು ಕ್ಷೇತ್ರಕ್ಕೂ ಅವರು ಆಗಮಿಸಲಿರುವರು. ಬೂತ್ ಮಟ್ಟದಲ್ಲಿ ಹೆಚ್ಚಿನ ಒತ್ತುಕೊಟ್ಟು ಚುನಾವಣಾ ಪ್ರಚಾರ ಮಾಡಲಾಗುವುದು. ಅಲ್ಲದೇ ಕ್ಷೇತ್ರದ ಅಲ್ಲಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News