ಎ.27ಕ್ಕೆ ಬಂಟ್ವಾಳದಲ್ಲಿ ರಾಹುಲ್ ಗಾಂಧಿಯಿಂದ ಪ್ರಚಾರ: ರಮಾನಾಥ ರೈ

Update: 2018-04-24 13:06 GMT

ಮಂಗಳೂರು, ಎ.24: ಚುನಾವಣಾ ಪ್ರಚಾರಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಎ.27ರಂದು ಬಂಟ್ವಾಳಕ್ಕೆ ಆಗಮಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ. ರಮಾನಾಥ ರೈ ತಿಳಿಸಿದ್ದಾರೆ.

ಪಕ್ಷದ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈ, ಎ.27ರಂದು ಬಂಟ್ವಾಳಕ್ಕೆ ಆಗಮಿಸಲಿರುವ ರಾಹುಲ್ ಗಾಂಧಿ ಬಿ.ಸಿ.ರೋಡ್ ಸಮೀಪದ ಜೋಡುಮಾರ್ಗ ಉದ್ಯಾನವನದಲ್ಲಿ ಬೆಳಗ್ಗೆ 10ಕ್ಕೆ ನಡೆಯುವ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದರು.

* ಧರ್ಮಸ್ಥಳಕ್ಕೆ ಭೇಟಿ: ಬಿ.ಸಿ.ರೋಡ್‌ನಲ್ಲಿ ನಡೆಯುವ ಪಕ್ಷದ ಬಹಿರಂಗ ಸಭೆಯ ಬಳಿಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇರ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ರೈ ತಿಳಿಸಿದರು.

* ಗೊಂದಲ ಇಲ್ಲ: ಚುನಾವಣಾ ಟಿಕೆಟ್ ಹಂಚಿಕೆಗೆ ಸಂಬಂಧಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಪಕ್ಷದಲ್ಲಿ ಯಾವುದೇ ಭಿನ್ನಮತವೂ ಇಲ್ಲ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷಕ್ಕೆ ಗೆಲುವು ಶತಸಿದ್ಧ. ಚುನಾವಣೆ ಎದುರಿಸಲು ಜಿಲ್ಲಾ ಕಾಂಗ್ರೆಸ್ ಸರ್ವ ಸನ್ನದ್ಧವಾಗಿದೆ ಎಂದು ರಮಾನಾಥ ರೈ ತಿಳಿಸಿದರು.

* ಬಿಜೆಪಿ ಒಡೆದ ಮನೆ: ರಾಜ್ಯ ಬಿಜೆಪಿಯಲ್ಲೇ ಗೊಂದಲ ಇದೆ. ಬಿಜೆಪಿ ಒಡೆದ ಮನೆಯಾಗಿದ್ದು, ಬೆಂಗಳೂರಿನ ಬಿಜೆಪಿಗೆ 8 ಬಾಗಿಲಿದ್ದರೆ, ದ.ಕ. ಜಿಲ್ಲಾ ಬಿಜೆಪಿಗೆ 5 ಬಾಗಿಲು ಇದೆ. ಬಿಜೆಪಿ ಅತೃಪ್ತರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ರಮಾನಾಥ ಹೇಳಿದರು.

* ನನಗೆ ವಿಶ್ರಾಂತಿಯ ಅಗತ್ಯವಿಲ್ಲ: ಸಂಸದ ನಳಿನ್ ಕುಮಾರ್ ಕಟೀಲು ಹೇಳಿರುವಂತೆ ನನಗೆ ವಿಶ್ರಾಂತಿಯ ಅಗತ್ಯವಿಲ್ಲ, ಬಹುಶಃ ನಳಿನ್‌ಗೆ ವಿಶ್ರಾಂತಿ ಇರಬಹುದು. ವರ್ಷದೊಳಗೆ ನಡೆಯುವ ಚುನಾವಣೆಯ ಮೂಲಕ ಅವರಿಗೆ ಸಂಪೂರ್ಣ ವಿಶ್ರಾಂತಿ ಕೊಡುತ್ತೇವೆ ಎಂದು ರಮಾನಾಥ ರೈ ವ್ಯಂಗ್ಯವಾಡಿದರು.

* ಯುವ ಕಾಂಗ್ರೆಸ್‌ಗೆ ಅಸಮಾಧಾನವಿಲ್ಲ: ಯುವ ಕಾಂಗ್ರೆಸ್‌ನಲ್ಲಿ ಯಾವುದೇ ಅಸಮಾಧಾನವಿಲ್ಲ. ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬೇಸರಗೊಂಡು ಕೆಲವರು ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿರಬಹುದು. ಆದರೆ, ಯಾರೂ ಪಕ್ಷದ ಜಿಲ್ಲಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿಲ್ಲ ಎಂದು ಸಚಿವ ರೈ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಯು.ಬಿ.ವೆಂಕಟೇಶ್, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಪಕ್ಷದ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮೇಯರ್ ಭಾಸ್ಕರ ಮೊಯ್ಲಿ, ಮುಖಂಡರಾದ ರಾಜಶೇಖರ್ ಕೋಟ್ಯಾನ್, ಇಬ್ರಾಹೀಂ ಕೋಡಿಜಾಲ್, ಬಿ.ಎಚ್. ಖಾದರ್, ಮಮತಾ ಗಟ್ಟಿ, ಶಶಿಧರ ಹೆಗ್ಡೆ, ಪೃಥ್ವಿರಾಜ್, ಎ.ಸಿ. ವಿನಯರಾಜ್, ಧನಂಜಯ ಅಡ್ಪಂಗಾಯ ಮತ್ತಿತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News