ಕಾಂಗ್ರೆಸ್ ಕೈಯಲ್ಲಿ ಮುಸ್ಲಿಮರ ರಕ್ತದ ಕಲೆಗಳಿವೆ ಎಂದ ಸಲ್ಮಾನ್ ಖುರ್ಷಿದ್

Update: 2018-04-24 11:01 GMT

ಅಲಿಘರ್, ಎ.24: "ನಾನು ಕಾಂಗ್ರೆಸ್ ಪಕ್ಷದ ಭಾಗವಾಗಿದ್ದೇನೆ. ಆದುದರಿಂದ ಮುಸ್ಲಿಮರ ರಕ್ತದ ಕಲೆಗಳು ನಮ್ಮ ಕೈಯ್ಯಲ್ಲಿದೆ ಎಂದು ನಾನು ಒಪ್ಪಿಕ್ಕೊಳ್ಳುತ್ತೇನೆ. ನಿಮ್ಮ  ಕೈಯ್ಯಲ್ಲೂ ರಕ್ತದ ಕಲೆಗಳಾಗಬಾರದೆಂದು ನೀವು ತಿಳಿಯಬೇಕು. ಅದಕ್ಕಾಗಿ ನಾವು ನಮ್ಮ  ಕೈಯ್ಯಲ್ಲಿರುವ ರಕ್ತದ ಕಲೆಗಳನ್ನು ತೋರಿಸಲು ಸಿದ್ಧ'' ಎಂದು ಹೇಳಿ ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷೀದ್ ವಿವಾದಕ್ಕೀಡಾಗಿದ್ದಾರೆ.

ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ಸಮಾರಂಭವೊಂದರಲ್ಲಿ ಹಳೆವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಅವರು ಮೇಲಿನಂತೆ ಹೇಳಿದ್ದಾರೆ. "ನೀವು ಅವರ ಮೇಲೆ ದಾಳಿ ನಡೆಸಿದರೆ, ನಿಮ್ಮ ಕೈಯ್ಯಲ್ಲಿ ರಕ್ತದ ಕಲೆಗಳಾಗುತ್ತವೆ. ನಮ್ಮ ಇತಿಹಾಸದಿಂದ ಸ್ವಲ್ಪವಾದರೂ ಕಲಿತು ಇಂತಹ ಸನ್ನಿವೇಶ ಸೃಷ್ಟಿಸಬೇಡಿ. ಹತ್ತು ವರ್ಷಗಳ ನಂತರ ಇಲ್ಲಿಗೆ ನೀವು ಬಂದಾಗ ನಿಮ್ಮಂತಹವರು ಮತ್ತೆ ನಿಮಗೆ ಇಂತಹ ಪ್ರಶ್ನೆ ಕೇಳುವಂತಹ ಸನ್ನಿವೇಶ ಸೃಷ್ಟಿಸಬೇಡಿ'' ಎಂದರು.

"ಮೊದಲನೇ ತಿದ್ದುಪಡಿ 1948ರಲ್ಲಾಗಿತ್ತು. ನಂತರ 1950ರಲ್ಲಿ ರಾಷ್ಟ್ರಪತಿ ಆದೇಶ ಬಂದಿತ್ತು. ಮುಂದೆ ಕಾಂಗ್ರೆಸ್ ಆಡಳಿತದಲ್ಲಿ ಹಸನಪುರ್, ಮಲಿಯನ, ಮುಝಫ್ಫರನಗರ ಮುಂತಾದ ಹಲವು ಕಡೆಗಳಲ್ಲಿ  ದಂಗೆಗಳು ನಡೆದಿದ್ದವು. ನಂತರ ಬಾಬರಿ ಮಸೀದಿಯ ಗೇಟುಗಳನ್ನು ತೆರೆದು ಒಳಗೆ ಮೂರ್ತಿಗಳನ್ನಿಡಲಾಯಿತು, ನಂತರ ಬಾಬರಿ ಮಸೀದಿಯನ್ನು ಧ್ವಂಸ ಮಾಡಲಾಯಿತು. ಕಾಂಗ್ರೆಸ್ ಕೈಯ್ಯಲ್ಲಿ ಮುಸ್ಲಿಮರ ರಕ್ತವಿದೆ. ಇದರ ಬಗ್ಗೆ ಏನಂತೀರಿ?'' ಎಂದು ಹಳೆ ವಿದ್ಯಾರ್ಥಿ ಖುರ್ಷೀದ್ ಆವರನ್ನು ಪ್ರಶ್ನಿಸಿದ್ದ.

ನಂತರ ಸುದ್ದಿಗಾರರೊಡನೆ ಮಾತನಾಡಿದ ಖುರ್ಷೀದ್ ``ನಾನು ಕಾಂಗ್ರೆಸ್ ಪಕ್ಷವನ್ನು ಸಮರ್ಥಿಸುತ್ತಿದ್ದೇನೆ. ಈಗ ಹೇಳಿದ್ದನ್ನು ಮುಂದೆಯೂ ಹೇಳುತ್ತೇನೆ,'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News