ಕನ್ಹಯ್ಯಾ 11 ಬಾರಿ ಅನುತ್ತೀರ್ಣರಾಗಿದ್ದಾರೆ ಎಂಬ ವೈರಲ್ ಸಂದೇಶದ ಹಿಂದಿನ ಸತ್ಯಾಂಶ ಇಲ್ಲಿದೆ

Update: 2018-04-24 11:27 GMT

ಹೊಸದಿಲ್ಲಿ, ಎ.24: ‘‘ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಯೂನಿಯನ್ ನ ಮಾಜಿ ಅಧ್ಯಕ್ಷ ಹಾಗೂ ಪಿಎಚ್‌ಡಿ ವಿದ್ಯಾರ್ಥಿ ಕನ್ಹಯ್ಯಾ ಕುಮಾರ್ 11 ಬಾರಿ ಅನುತ್ತೀರ್ಣರಾಗಿದ್ದಾರೆ, ಮೂಲಗಳ ಪ್ರಕಾರ ಅವರ ಗುರುಗಳು 2019ರ ಚುನಾವಣೆ ತನಕ ಅವರು ಜೆಎನ್‌ಯುವಿನಲ್ಲೇ ಇರಬೇಕೆಂದು ಬಯಸಿರುವುದು ಇದಕ್ಕೆ ಕಾರಣ’’ ಎಂಬ ನಕಲಿ ಪೋಸ್ಟ್ ಒಂದು ಅಂತರ್ಜಾಲದಲ್ಲಿ ಮುಖ್ಯವಾಗಿ ಟ್ವಿಟ್ಟರ್ ಮತ್ತು ವಾಟ್ಸ್ಯಾಪ್ ನಲ್ಲಿ ಭಾರೀ ಸುದ್ದಿ ಮಾಡಿದೆ.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದವರಲ್ಲಿ ಉದ್ಯಮಿ ಸುಹೇಲ್ ಸೇಠ್ ಕೂಡ ಸೇರಿದ್ದರು. ‘‘ಕನ್ಹಯ್ಯಾ ತೆರಿಗೆದಾರರ ಹಣವನ್ನು ಪೋಲು ಮಾಡುತ್ತಿದ್ದಾರೆ ಹನ್ನೊಂದು ಬಾರಿ ಫೇಲ್ ಆಗಿದ್ದಾರೆಂದು ಯಾರೋ ಹೇಳಿದರು. ಅವರು ಐಎನ್‌ಸಿ ಇಂಡಿಯಾ ಪಕ್ಷಕ್ಕೆ ಅರ್ಜಿ ಸಲ್ಲಿಸಲು ಇದು ಅವರನ್ನು ಅರ್ಹಗೊಳಿಸುತ್ತದೆಯೇ?’’ ಎಂದು ಸೇಠ್ ತಮ್ಮ ಪೋಸ್ಟ್ ನಲ್ಲಿ ಪ್ರಶ್ನಸಿದ್ದರು.

ಹೀಗೆ ಹಲವರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ ನಂತರ ಕನ್ಹಯ್ಯಾ ಕುಮಾರ್ ಅವರು ಟ್ವಿಟ್ಟರ್ ಗೆ ಮೊರೆ ಹೋಗಿ ಸ್ಪಷ್ಟೀಕರಣ ನೀಡಿದ್ದಾರಲ್ಲದೆ ಪಿಎಚ್‌ಡಿ ಕೋರ್ಸ್ ನಲ್ಲಿ ಫೇಲ್ ಆಗಲು ಪರೀಕ್ಷೆಗಳಿಲ್ಲ ಎಂದಿದ್ದಾರೆ. ತಾನು ಎಂಫಿಲ್-ಪಿಎಚ್‌ಡಿ ಇಂಟಗ್ರೇಟೆಡ್ ಕೋರ್ಸ್ ಗೆ 2011ರಲ್ಲಿ ಸೇರಿದ್ದು ಹಾಗೂ ಈಗ ಏಳನೇ ಮತ್ತು ಅಂತಿಮ ವರ್ಷದಲ್ಲಿದ್ದೇನೆ. ತನ್ನ ಪಿಎಚ್‌ಡಿ ಪ್ರಬಂಧ ‘‘ಸೋಶಿಯಲ್ ಟ್ರಾನ್ಸ್‌ಫರ್ಮೇಶನ್ ಇನ್ ಸೌತ್ ಆಫ್ರಿಕಾ’’ ಅಂತಿಮ ಹಂತದಲ್ಲಿದ್ದು ಜುಲೈ 21, 2018ರಲ್ಲಿ ಸಲ್ಲಿಸುವುದಾಗಿಯೂ ಅವರು ತಿಳಿಸಿದ್ದಾರೆ. ‘‘ಹಲವರಿಗೆ ನಿರಾಸೆ ತಂದಿರುವ ಸುದ್ದಿಯೆಂದರೆ ನಾನು ಯಾವತ್ತೂ ಯಾವುದೇ ಪರೀಕ್ಷೆಯಲ್ಲಿ ಫೇಲ್ ಆಗಿಲ್ಲ’’ ಎಂದೂ ಅವರು ಹೇಳಿದ್ದಾರೆ.

ತಾವು ನಕಲಿ ಟ್ವೀಟ್ ನಿಂದ ಮೋಸ ಹೋಗಿರುವುದು ಸೇಠ್ ಅವರಿಗೆ ತಿಳಿಯುತ್ತಲೇ ಮತ್ತೆ ಟ್ವೀಟ್ ಮಾಡಿದ ಅವರು ‘‘ಆದರೂ ಅವರ ತಮ್ಮ ಡಾಕ್ಟರೇಟ್ ಗಾಗಿ ಇನ್ನಷ್ಟೇ ಪ್ರಬಂಧ ಮಂಡಿಸಬೇಕಿದೆ. ನಮ್ಮ ನಡುವೆ ಡಾ.ಕನ್ಹಯ್ಯಾ ಇರುವುದಕ್ಕಿಂತ ಹೆಚ್ಚಿನ ಆಘಾತ ಬೇರಿನ್ನೇನಿಲ್ಲ’’ ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News