ಪುನರ್ ಪ್ರತಿಷ್ಠಾ ಕಾರ್ಯಕ್ರಮಕ್ಕೆ ನಾಸಿರ್ ಮಅದನಿಯನ್ನು ಆಮಂತ್ರಿಸಿದ ಶ್ರೀ ಮಹಾದೇವ ದೇವಸ್ಥಾನ ಮಂಡಳಿ

Update: 2018-04-24 16:28 GMT

ಬೆಂಗಳೂರು, ಎ. 24:  ಕ್ಯಾನ್ಸರ್ ಪೀಡಿತ ತಾಯಿಯನ್ನು ಭೇಟಿಯಾಗಲು ಹಾಗು ವೆಣ್ಣಲ ತೈಕಾಟ್ಟ್ ಶ್ರೀ ಮಹಾದೇವ ದೇವಸ್ಥಾನದ ಕಾರ್ಯಕ್ರಮದಲ್ಲಿ ಭಾಗವಹಿಸಲು ತನಗೆ ಅನುಮತಿ ನೀಡಬೇಕೆಂದು ಕೋರಿ ಪಿಡಿಪಿ ಅಧ್ಯಕ್ಷ ಅಬ್ದುನ್ನಾಸಿರ್ ಮಅದನಿ ಎನ್‍ಐಎ ವಿಶೇಷ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. 

ಮಅದನಿ ತಾಯಿ ಅಸ್ಮಾಬೀವಿಯವರು ತಿರುವನಂತಪುರಂ ರೀಜನಲ್ ಕ್ಯಾನ್ಸರ್ ಸೆಂಟರಿನಲ್ಲಿ ಚಿಕಿತ್ಸೆ ಪಡೆದು ಇದೀಗ ಮನೆಯಲ್ಲಿದ್ದಾರೆ. ಅವರನ್ನು ಭೇಟಿಯಾಗಲು ಅನುಮತಿಯನ್ನು ಕೋರಿ ಮಅದನಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಸರಕಾರದ ಅಭಿಪ್ರಾಯ ಕೇಳಿರುವ ಎನ್‍ಐಎ ನ್ಯಾಯಾಲಯ ಬುಧವಾರ ಅರ್ಜಿಯನ್ನು ವಿಚಾರಣೆಗೆತ್ತಿಕೊಳ್ಳಲಿದೆ. 

ಎಪ್ರಿಲ್ 27ರಿಂದ ಮೇ 12ರವರೆಗೆ ಕೇರಳ ಭೇಟಿಗೆ ಮಅದನಿ ಅನುಮತಿ ಯಾಚಿಸಿದ್ದಾರೆ. ಎರ್ನಾಕುಳಂ ವೆಣ್ಣಲದ ತೈಕ್ಕಾಟ್ ಮಹಾದೇವ ದೇವಸ್ಥಾನದ ಪುನರ್ ಪ್ರತಿಷ್ಠಾ ಕಾರ್ಯಕ್ರಮದ ಪ್ರಯುಕ್ತ ನಡೆಯುವ ಹಿಂದೂ-ಮುಸ್ಲಿಂ ಸೌಹಾರ್ದ ಸಮ್ಮೇಳನದಲ್ಲಿ ಭಾಗವಹಿಸಲು ಕೂಡಾ ಅವರು ಕೋರ್ಟಿನ ಅನುಮತಿ ಕೇಳಿದ್ದಾರೆ. ಕಳೆದ ವರ್ಷ ಆಗಸ್ಟ್ ನಲ್ಲಿ ಅನಾರೋಗ್ಯಪೀಡಿತ ತಾಯಿಯನ್ನು ಸಂದರ್ಶಿಸಲು ಮತ್ತು ಪುತ್ರನ ಮದುವೆಯಲ್ಲಿ ಭಾಗವಹಿಸಲು ಸುಪ್ರೀಂಕೋರ್ಟಿನ ನಿರ್ದೇಶನದಂತೆ ಮಅದನಿಗೆ ಕೇರಳ ಭೇಟಿಗೆ ಅನುಮತಿ ದೊರಕಿತ್ತು. 

ಮಅದನಿಗೆ ಆಹ್ವಾನ ನೀಡಿದ ದೇವಸ್ಥಾನದ ಆಡಳಿತ ಮಂಡಳಿ: 
ವೆಣ್ಣಲ ತೈಕಾಟ್ಟ್ ಶ್ರೀ ಮಹಾದೇವ ದೇವಸ್ಥಾನದ ಪುನರ್ ಪ್ರತಿಷ್ಠಾ ಮತ್ತು ನವೀಕರಣ ಕಲಶ ಕಾರ್ಯಕ್ರಮ ನಡೆಯುತ್ತಿದ್ದು, ಎಪ್ರಿಲ್ 14,15 ರಂದು ಎಲ್ಲ ಧರ್ಮದವರಿಗೆ ದೇವಸ್ಥಾನಕ್ಕೆ ಭೇಟಿ ನೀಡಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಅಂದು ವಿವಿಧ ಧರ್ಮಗಳ ನಾಯಕರನ್ನು ದೇವಸ್ಥಾನಕ್ಕೆ ಭೇಟಿ ನೀಡಲು ಆಹ್ವಾನಿಸಲಾಗಿದೆ. ಜೊತೆಗೆ ಮಅದನಿಯವರಿಗೂ ದೇವಸ್ಥಾನ ಸಂದರ್ಶಿಸಲು ಆಮಂತ್ರಣ ನೀಡಲಾಗಿದೆ. ಆದರೆ, ತನಗೆ ಅತ್ತ ಬರಲು ನ್ಯಾಯಾಲಯದ ಅನುಮತಿ ಬೇಕಾಗಿದೆ. ನ್ಯಾಯಾಲಯದ ಅನುಮತಿ ಸಿಕ್ಕಿದಾಗ ಬೇರೆ ಯಾವುದಾದರೂ ದಿನ ದೇವಸ್ಥಾನಕ್ಕೆ  ಭೇಟಿ ನೀಡಲು ಸಾಧ್ಯವೇ ಎಂದು ಮಅದನಿ ಪ್ರಶ್ನಿಸಿದ್ದರು. ನ್ಯಾಯಾಲಯದ ಅನುಮತಿ ಸಿಕ್ಕಿದಾಗ ದೇವಸ್ಥಾನ ಭೇಟಿಗೆ ವ್ಯವಸ್ಥೆ ಮಾಡುವುದಾಗಿ ನಾವು ಹೇಳಿದ್ದೇವೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News