72 ಗಂಟೆಯಲ್ಲಿ 37 ಮಾವೋವಾದಿಗಳ ಹತ್ಯೆ

Update: 2018-04-24 15:48 GMT

(ಗಡ್‌ಚಿರೋಲಿ), ಎ. 24: ಮಹಾರಾಷ್ಟ್ರ-ಚತ್ತೀಸ್‌ಗಢ ಗಡಿಯ ಗಡ್ಚಿರೋಲಿಯ ಇಂದ್ರಾವತಿ ನದಿಯಲ್ಲಿ ಸೋಮವಾರ 15 ಮಂದಿ ಶಂಕಿತ ಮಾವೋವಾದಿಗಳ ಕೊಳೆತ ಶವಗಳು ಪತ್ತೆಯಾಗಿವೆ. ಇದರೊಂದಿಗೆ ಕಳೆದ 72 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಎನ್‌ಕೌಂಟರ್‌ನಲ್ಲಿ ಹತರಾದ ಮಾವೋವಾದಿಗಳ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.

ಎಪ್ರಿಲ್ 22ರಂದು ನಡೆದ ಎನ್‌ಕೌಂಟರ್ 16 ಮಾವೋವಾದಿಗಳನ್ನು ಹತ್ಯೆಗೈಯಲಾದ ಗಡ್ಜಿರೋಲಿಯ ಕಸಾನ್ಸುರ್‌ನ ಸಮೀಪ ಇರುವ ಇಂದ್ರಾವತಿ ನದಿ ದಡದಲ್ಲಿ ಈಗ ಮಾವೋವಾದಿಗಳ ಮೃತದೇಹಗಳು ಪತ್ತೆಯಾಗಿವೆ. ಮೃತದೇಹಗಳು ಊದಿಕೊಂಡಿದ್ದು, ಕೊಳೆಯಲು ಆರಂಭಿಸಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಗಡ್ಚಿರೋಲಿ ಪೊಲೀಸ್‌ನ ಸಿ-60 ಕಮಾಂಡೋ ಹಾಗೂ ಸಿಆರ್‌ಪಿಎಫ್‌ನ ಬೆಟಾಲಿಯನ್ 9 ರಾಲೆ-ಕಸ್ನಾಸುರ್ ಅರಣ್ಯದಲ್ಲಿ ರವಿವಾರ ಎನ್‌ಕೌಂಟರ್ ನಡೆಸಿತ್ತು. ಈ ಎನ್‌ಕೌಂಟರ್‌ನಲ್ಲಿ 16 ಮಂದಿ ಮಾವೊವಾದಿಗಳು ಮೃತಪಟ್ಟಿದ್ದರು. ಇವರಲ್ಲಿ ನಕ್ಸಲ್‌ನ ಹಿರಿಯ ಕಮಾಂಡರ್ ಸಿನು ಹಾಗೂ ಸಾಯಿನಾಥ್ ಸೇರಿದಂತೆ 12 ಮಂದಿಯ ಗುರುತು ಪತ್ತೆ ಹಚ್ಚಲಾಗಿತ್ತು.

ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಎನ್‌ಕೌಂಟರ್‌ನಲ್ಲಿ ಗಂಭೀರ ಗಾಯಗೊಂಡ ಕೆಲವು ನಕ್ಸಲೀಯರು ಪರಾರಿಯಾಗಿದ್ದರು. ನದಿಯಲ್ಲಿ ಮೃತದೇಹ ಪತ್ತೆಯಾಗಿರುವುದು ಇವರಲ್ಲಿ ಕೆಲವರದ್ದಾಗಿರಬಹುದೆಂದು ಪೊಲೀಸ್ ಹೆಚ್ಚುವರಿ ಪ್ರಧಾನ ನಿರ್ದೇಶಕ (ರಾಜ್ಯ ಕಾನೂನು ಹಾಗೂ ಸುವ್ಯವಸ್ಥೆ) ಬಿಪಿನ್ ಬಿಹಾರಿ ತಿಳಿಸಿದ್ದಾರೆ. ಸೋಮವಾರ ಇಂದ್ರಾವತಿಯಲ್ಲಿ ಮೃತದೇಹಗಳಿಗಾಗಿ ಶೋಧ ನಡೆಸಲಾಯಿತು. ಆಗ 15 ಮೃತದೇಹಗಳು ನೀರಿನಲ್ಲಿ ಪತ್ತೆಯಾದವು. ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕಗಳು ಕೂಡ ನದಿ ನೀರಿಲ್ಲಿ ಪತ್ತೆಯಾಗಿವೆ. ಮೃತದೇಹ ಹಾಗೂ ಶಸ್ತ್ರಾಸ್ತ್ರಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ. ‘‘ನಾವು ಇಂದು ಬೆಳಗ್ಗೆ 15 ಮೃತದೇಹಗಳನ್ನು ಪತ್ತೆ ಮಾಡಿದ್ದೇವೆ. ಈ ಎಲ್ಲ ಮೃತದೇಹಗಳು ರವಿವಾರ ಎನ್‌ಕೌಂಟರ್ ನಡೆದ ಸ್ಥಳದಲ್ಲೇ ಪತ್ತೆಯಾಗಿವೆ. ಇದರೊಂದಿಗೆ ರವಿವಾರ ನಡೆದ ಎನ್‌ಕೌಂಟರ್‌ನಲ್ಲಿ ಒಟ್ಟು 31 ಮಾವೋವಾದಿಗಳು ಹತರಾಗಿದ್ದಾರೆ ’’ ಎಂದು ಮಹಾರಾಷ್ಟ್ರ ಪೊಲೀಸ್‌ನ ನಕ್ಸಲ್ ವಿರೋಧಿ ಕಾರ್ಯಾಚರಣೆ ಘಟಕದ ಐಜಿ ಶರದ್ ಶೇಲಾರ್ ತಿಳಿಸಿದ್ದಾರೆ.

ಗಡ್ಚಿರೋಳಿಯ ಜಿಮಲ್ಗಟ್ಟ ಪ್ರದೇಶದಲ್ಲಿ ಎಪ್ರಿಲ್ 23ರಂದು ನಡೆದ ಇನ್ನೊಂದು ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆ 6 ಮಾವೋವಾದಿಗಳನ್ನು ಹತ್ಯೆಗೈದಿದೆ. ‘‘ಜಿಮಲ್ಗಟ್ಟದಲ್ಲಿ 6 ಮಂದಿ ನಕ್ಸಲೀಯರನ್ನು ಹತ್ಯೆಗೈಯಲಾಗಿದೆ. ಇವರಲ್ಲಿ ನಾಲ್ವರು ಮಹಿಳೆಯರು. ಸಿಪಿಐ (ಮಾವೊವಾದಿ) ವಿಭಾಗೀಯ ಸಮಿತಿಯ ಸದಸ್ಯ ನಂದು ಕೂಡ ಹತರಾದವರಲ್ಲಿ ಸೇರಿದ್ದಾರೆ. ಎನ್‌ಕೌಂಟರ್ ನಡೆದ ಸ್ಥಳದಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ’’ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News