ಗುಜರಾತ್: ಬಲವಂತದ ಭೂಸ್ವಾಧೀನ ವಿರೋಧಿಸಿ ಇಚ್ಛಾ ಮರಣ ಕೋರಿ ರೈತರ ಪತ್ರ

Update: 2018-04-24 16:22 GMT

ಅಹ್ಮದಾಬಾದ್, ಎ.24: ರಾಜ್ಯ ಸರಕಾರದ ಅಧೀನದ ವಿದ್ಯುತ್ ಘಟಕಕ್ಕೆ ತಮ್ಮ ಜಮೀನನ್ನು ಬಲವಂತವಾಗಿ ಭೂಸ್ವಾಧೀನ ಮಾಡಿಕೊಳ್ಳುವುದನ್ನು ವಿರೋಧಿಸಿ ಹೋರಾಟ ಮಾಡುತ್ತಿರುವ ಗುಜರಾತ್‌ನ ಭಾವನಗರ ಜಿಲ್ಲೆಯ ಸುಮಾರು 5,000ಕ್ಕೂ ಹೆಚ್ಚಿನ ರೈತರು ಇಚ್ಛಾಮರಣಕ್ಕೆ ಅನುಮತಿ ಕೋರಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಎಂದು ರೈತ ಸಂಘಟನೆಯ ಮುಖಂಡರು ತಿಳಿಸಿದ್ದಾರೆ.

ತಾವು ಕೃಷಿ ಕಾರ್ಯ ನಡೆಸಿಕೊಂಡು ಬಂದಿರುವ ಫಲವತ್ತಾದ ಭೂಮಿಯನ್ನು ರಾಜ್ಯ ಸರಕಾರ ಹಾಗೂ ಗುಜರಾತ್ ಪವರ್ ಕಾರ್ಪೊರೇಶನ್ ಲಿ.(ಜಿಪಿಸಿಎಲ್) ಸಂಸ್ಥೆ ಬಲವಂತವಾಗಿ ಭೂಸ್ವಾಧೀನ ಮಾಡಿಕೊಂಡಿದೆ. ಇದರಿಂದ ತೊಂದರೆಗೊಳಗಾಗಿರುವ 12 ಗ್ರಾಮದ ರೈತರು ಹಾಗೂ ಅವರ ಕುಟುಂಬದವರು ಸೇರಿದಂತೆ ಒಟ್ಟು 5,259 ಜನ ಇಚ್ಛಾ ಮರಣ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ರೈತರ ಪರ ಹೋರಾಟ ನಡೆಸುತ್ತಿರುವ ‘ಗುಜರಾತ್ ಖೇದತ್ ಸಮಾಜ್’ನ ಸದಸ್ಯ ನರೇಂದ್ರಸಿಂಹ ಗೊಹಿಲ್ ಹೇಳಿದ್ದಾರೆ. ರೈತರು ಹಾಗೂ ಅವರ ಕುಟುಂಬದವರು ಸಹಿ ಹಾಕಿರುವ ಪತ್ರವನ್ನು ರಾಷ್ಟ್ರಪತಿ, ಪ್ರಧಾನಿ ಹಾಗೂ ಗುಜರಾತ್ ಮುಖ್ಯಮಂತ್ರಿಗೆ ಕಳುಹಿಸಲಾಗಿದೆ ಎಂದವರು ತಿಳಿಸಿದ್ದಾರೆ.

ಈ ಪತ್ರ ಜಿಲ್ಲಾಧಿಕಾರಿ ಕಚೇರಿಯ ನೋಂದಣಿ ವಿಭಾಗಕ್ಕೆ ತಲುಪಿದೆ. ಇದನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ರಾಜ್ಯ ಸರಕಾರ, ಜಿಪಿಸಿಎಲ್ ಪೊಲೀಸ್ ಬಲವನ್ನು ಪ್ರಯೋಗಿಸಿ ತಮ್ಮನ್ನು ಜಾಗದಿಂದ ಓಡಿಸಲು ಪ್ರಯತ್ನಿಸುತ್ತಿದ್ದಾರೆ. ಈ ಭೂಮಿ ಹಲವಾರು ವರ್ಷಗಳಿಂದ ತಮ್ಮ ಸ್ವಾಧೀನದಲ್ಲಿದೆ. 2013ರ ಭೂಸ್ವಾಧೀನ ಕಾಯ್ದೆಯ ಪ್ರಕಾರ, ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಐದು ವರ್ಷ ಕಳೆದರೂ ಕಾಮಗಾರಿ ಆರಂಭಿಸದಿದ್ದರೆ ಆ ಬಳಿಕ ಆ ಸಂಸ್ಥೆಗೆ ಆ ಭೂಮಿಯ ಒಡೆತನ ಇರುವುದಿಲ್ಲ. ಆ ಬಳಿಕ ಮತ್ತೊಮ್ಮೆ ಭೂಸ್ವಾಧೀನ ಪ್ರಕ್ರಿಯೆ ನಡೆಸಬೇಕು. ಆದರೆ ಜಿಪಿಸಿಎಲ್ ಇದನ್ನು ಸ್ವಾಧೀನಪಡಿಸಿಕೊಂಡು 20 ವರ್ಷಕ್ಕೂ ಹೆಚ್ಚು ಕಾಲವಾಗಿದೆ. ಆದ್ದರಿಂದ ಇದು ಇದು ಕಾನೂನು ವಿರೋಧಿ ಕೃತ್ಯವಾಗಿದೆ ಎಂದು ರೈತರು ಆರೋಪಿಸುತ್ತಿದ್ದಾರೆ. ಕಳೆದ ಒಂದು ತಿಂಗಳಿಂದ ಈ 12 ಗ್ರಾಮಗಳಲ್ಲಿ ಜಿಲ್ಲಾಡಳಿತ ಸೆಕ್ಷನ್ 144 ಜಾರಿಗೊಳಿಸಿದೆ. ಅಲ್ಲದೆ ಶಾಂತರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಅಶ್ರುವಾಯು ಸಿಡಿಸಿದೆ ಎಂದು ರೈತರು ದೂರಿದ್ದಾರೆ.

 ತಮ್ಮ ಭೂಮಿಯನ್ನು ಬಲವಂತವಾಗಿ ಸ್ವಾಧೀನ ಮಾಡಿಕೊಂಡಿರುವ ಕಾರಣ ತಾವು ಉಗ್ರಗಾಮಿಗಳೇ ಎಂಬ ಪ್ರಶ್ನೆ ರೈತರ ಮನದಲ್ಲಿ ಮೂಡಿದೆ. ಆದ್ದರಿಂದ ಸೇನಾ ಸಿಬ್ಬಂದಿ ಬುಲೆಟ್‌ಗೆ ಎದೆಯೊಡ್ಡಿ ಸಾಯಲು ರೈತರು ಇಚ್ಛಿಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News