ತಾನು ಧರ್ಮ ವಿರೋಧಿಲ್ಲ, ಕೋಮುವಾದಿಗಳ ವಿರೋಧಿ: ರಮಾನಾಥ ರೈ

Update: 2018-04-25 06:48 GMT

ಬಂಟ್ವಾಳ, ಎ. 24: ‘‘ನಾನು ಯಾವುದೇ ಧರ್ಮ ವಿರೋಧಿಯಲ್ಲ, ಕೋಮುವಾದಿಗಳ ವಿರೋಧಿ’’ ಎಂದು ಕಾಂಗ್ರೆಸ್ ಅ್ಯರ್ಥಿ ಬಿ.ರಮಾನಾಥ ರೈ ಹೇಳಿದ್ದಾರೆ.

ಪಂಜಿಕಲ್ಲು ಮೂಡನಾಡಗೋಡು ಗ್ರಾಮದಲ್ಲಿ ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರ ಬೂತ್‌ ಮಟ್ಟದ ಸಭೆಯಯನ್ನುದ್ದೇಶಿಸಿ ಮಾತನಾಡಿದ ಅವರು, ತನ್ನನ್ನು ಹಿಂದೂ ವಿರೋಧಿ ಎಂದು ಹೇಳುವ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಿಗೆ ನಿಜವಾಗಿಯೂ ತಾನು ಕೋಮುವಾದಿ ವಿರೋಧಿ ಎಂಬುದರ ಸ್ಪಷ್ಟ ಅರಿವಿದೆ ಎಂದು ಹೇಳಿದರು.

ಬಂಟ್ವಾಳದಲ್ಲಿ ಸುಮಾರು 73 ದೇವಸ್ಥಾನಗಳಿಗೆ ಸರಕಾರದಿಂದ ಗರಿಷ್ಠ ಅನುದಾನ ದೊರಕಿಸಿಕೊಟ್ಟಿದ್ದೇನೆ. ಅಲ್ಲದೆ, ತಾನು 17 ದೇವಸ್ಥಾನಗಳ ಅಧ್ಯಕ್ಷ, ಗೌರವಾಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಈ ಸಾಮಾನ್ಯ ಅರಿವೂ ಕೂಡಾ ಇಲ್ಲದ ಬಿಜೆಪಿ ನಿಜವಾಗಿಯೂ ಕಂಡುಕೊಂಡ ಹಿಂದೂ ಧರ್ಮ ಮತ್ತು ದೇವಸ್ಥಾನಗಳು ಯಾವುವು? ಎಂದು ಪ್ರಶ್ನಿಸಿದ ಅವರು, ತಾನು, ತನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ಯಾವತ್ತೂ ನಡೆದುಕೊಂಡವನಲ್ಲ. ಸರ್ವೇ ಜನಃ ಸುಖಿನೋ ವಂತು ಎಂಬುದೇ ನಮ್ಮ ಧ್ಯೇಯ ಧೋರಣೆಯಾಗಿದೆ ಎಂದು ರಮಾನಾಥ ರೈ ಹೇಳಿದರು.

ತಾನು ಏನೆಂಬುದನ್ನು ಈ ಕ್ಷೇತ್ರದ ಜನತೆ ತಿಳಿದುಕೊಂಡಿದ್ದರಿಂದಲೇ ಇಷ್ಟು ಬಾರಿಯೂ ಚುನಾವಣೆಯಲ್ಲಿ ಗೆದ್ದಿದ್ದೇನೆ. ಈ ಬಾರಿಯೂ ಜನತೆ ತನ್ನನ್ನು ಬಹುಮತದಿಂದ ಆರಿಸಿ ವಿಧಾನಸಭೆಗೆ ಕಳುಹಿಸುತ್ತಾರೆ ಎಂಬ ಆತ್ಮವಿಶ್ವಾಸ ತನಗಿದೆ ಎಂದರು.

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಜಿಲ್ಲಾ ಡಿಸಿಸಿ ಉಪಾಧ್ಯಕ್ಷ ಬೇಬಿ ಕುಂದರ್ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News