ಕಾಂಗ್ರೆಸ್‌ನ ತುಂಡು ನಾಯಕರಿಂದ ತನಗೆ ಟಿಕೆಟ್ ತಪ್ಪಿತು: ವಿಜಯ ಕುಮಾರ್ ಶೆಟ್ಟಿ

Update: 2018-04-25 14:22 GMT

ಮಂಗಳೂರು, ಎ.25: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಟಿಕೆಟ್ ದೊರೆಯುವುದು ಖಚಿತವಾಗಿದ್ದರೂ ಕೊನೆ ಕ್ಷಣದಲ್ಲಿ ಪಕ್ಷದ ಕೆಲ ತುಂಡು ನಾಯಕರಿಂದಾಗಿ ತಪ್ಪಿ ಹೋಗಿದೆ. ಪಕ್ಷದಿಂದ ನನಗೆ ತೊಂದರೆಯಾಗಿಲ್ಲ ಆದರೆ, ಸಂಪೂರ್ಣ ಪ್ರಯೋಜನ ಮೀರಿ ಪ್ರಯೋಜನ ಪಡೆದಿರುವ ಕೆಲ ತುಂಡು ನಾಯಕರ ಜಾತಕ ನನ್ನ ಕೈಯಲ್ಲಿದ್ದು ಮುಂದಿನ ದಿನಗಳಲ್ಲಿ ಅದನ್ನು ಬಿಚ್ಟಿಡುವೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ, ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈ ಹಿಂದಿನ ಅವಧಿಯಲ್ಲಿಯೂ ಎಂಎಲ್‌ಸಿ ಸ್ಥಾನ ನೀಡುವ ಆಶ್ವಾಸನೆಯೊಂದಿಗೆ ನಾನು ಸ್ಪರ್ಧೆಯಿಂದ ದೂರ ಉಳಿಯುವಂತಾಯಿತು. ಇದೀಗ ಈ ಬಾರಿಯೂ ಎಂಎಲ್‌ಸಿ ಸ್ಥಾನದ ಆಶ್ವಾಸನೆ ದೊರಕಿದೆ. ಎಪ್ರಿಲ್ 27ರಂದು ರಾಹುಲ್ ಗಾಂಧಿಯವರ ಭೇಟಿ ವೇಳೆ ಅವರ ಜತೆ ಮಾತುಕತೆಗೆ ಪಕ್ಷದ ಮುಖಂಡರಾದ ಕೆ.ಸಿ.ವೇಣುಗೋಪಾಲ್ ಮತ್ತು ವಿಷ್ಣುನಾಥ್ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ. ಆ ಬಳಿಕ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಸಕ್ರಿಯವಾಗಿ ಪ್ರಚಾರ ಕಾರ್ಯದಲ್ಲಿ ತೊಡಗುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇನೆ ಎಂದರು.

ದೇಶಕ್ಕೆ ಸ್ವಾತಂತ್ರ ದೊರಕಿಸಿಕೊಟ್ಟ ಕಾಂಗ್ರೆಸ್ ಪಕ್ಷ ಸ್ಪರ್ಧೆಯಲ್ಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅತ್ಯುತ್ತಮ ಜನೋಪಯೋಗಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಪಕ್ಷದ ಮೇಲಿನ ಅಭಿಮಾನ, ಪ್ರೀತಿಯಿಂದಾಗಿ ಬೇರೆ ಯಾವುದೇ ರೀತಿಯ ಚಿಂತನೆ ಮಾಡಿಲ್ಲ. ಸದ್ಯ ಎಲ್ಲಾ ಪಕ್ಷಗಳಲ್ಲೂ ಪಕ್ಷಕ್ಕೆ ಸೇರಬೇಕು, ಸ್ಥಾನ ಪಡೆಯಬೇಕು ಹಣ ಮಾಡಬೇಕೆಂಬ ಉದ್ದೇಶವೇ ಹೊರತು ಸೇವೆ ಮಾಡಲು ಯಾರೂ ಬರುವುದಿಲ್ಲ ಎಂದವರು ಬೇಸರ ವ್ಯಕ್ತಪಡಿಸಿದರು.

ಈ ಬಾರಿಯೂ ಟಿಕೆಟ್ ವಂಚಿತರಾಗಿರುವ ಬಗ್ಗೆ ಆಘಾತವಾಗಿದೆ. ನೇತ್ರಾವತಿ ನದಿ ಹೋರಾಟದಲ್ಲಿ ಭಾಗವಹಿಸಿದ್ದಕ್ಕೆ ಟಿಕೆಟ್ ತಪ್ಪಿದೆ ಎಂದು ಕೆಲವರು ಹೇಳುತ್ತಾರೆ. ಆದರೆ ಇದು ಕೈಲಾಗದವರು ಮೈ ಪರಚಿಕೊಂಡ ರೀತಿಯ ಹೇಳಿಕೆ. ಅಧಿಕಾರಿಗಳು ಹಾಗೂ ಕೆಲ ಜನಪ್ರತಿನಿಧಿಗಳ ಹುನ್ನಾರದಿಂದಾಗಿ ಎತ್ತಿನಹೊಳೆ ಯೋಜನೆ ಆಗಿದೆ. ಈ ಯೋಜನೆ ವಿರುದ್ಧ ಜಿಲ್ಲೆಯಲ್ಲಿ ಸಿಪಿಎಂ ಪಕ್ಷವನ್ನು ಹೊರತುಪಡಿಸಿ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗಿತ್ತು. ಹಾಗಿದ್ದರೂ ಈ ಕಾರಣಕ್ಕಾಗಿ ನನ್ನನ್ನು ಗುರಿಯಾಗಿಸಿದ್ದರೆ ಇದು ಅಕ್ಷಮ್ಯ ಅಪರಾಧ ಎಂದವರು ಹೇಳಿದರು.

ಉತ್ತರ ಕ್ಷೇತ್ರದಲ್ಲಿ ಟಿಕೆಟ್ ಪಡೆದಿರುವ ಮೊಯ್ದಿನ್ ಬಾವಾ ಮೇಲೆ ತಮಗೆ ಸಿಟ್ಟಿದೆಯೇ ಎಂಬ ಪ್ರಶ್ನೆಗೆ, ಚುನಾವಣೆ ಮುಗಿದ ಬಳಿಕ ಆ ಬಗ್ಗೆ ಮಾತನಾಡುವೆ. ಅವರಿಗೆ ಸ್ವಲ್ಪ ಸಲಹೆ ನೀಡಬೇಕೆಂದಿದ್ದೇನೆ. ಅವರು ತುಂಬಾ ಓವರ್‌ಸ್ಪೀಡ್ ಎಂದು ವಿಜಯ ಕುಮಾರ್ ಶೆಟ್ಟಿ ಹೇಳಿದರು.

ನೇತ್ರಾವತಿ ವಿಷಯದಲ್ಲಿ ತಮ್ಮ ಹೋರಾಟ ನಿಲ್ಲದು ಎಂದು ಹೇಳಿದ ವಿಜಯ ಕುಮಾರ್ ಶೆಟ್ಟಿ, ಜನರಿಗಾಗಿ ನಾನು ಹೋರಾಟ ಮುಂದುವರಿಸಲಿದ್ದೇನೆ ಎಂದರು.

ಈ ಹಿಂದೆ ನೀವಾಗಿಯೇ ನಿಮಗೆ ಕೊಟ್ಟ ಟಿಕೆಟ್ ಬಿಟ್ಟುಕೊಟ್ಟಿರುವುದೇಕೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಕೃಷ್ಣ ಪಾಲೆಮಾರ್ ಜತೆ ಹಣಬಲದಲ್ಲಿ ಸ್ಪರ್ಧಿಸಲು ಕಷ್ಟ ಆಗಬಹುದು ಎಂಬ ಕಾರಣಕ್ಕೆ ಮಾತ್ರವೇ ಹಿಂದೆ ಸರಿದಿದ್ದೆ. ಆದರೆ ಅದಕ್ಕೂ ಬೇರೆ ಕಾರಣ ಹೆಣೆಯಲಾಗಿದೆ. ಆದರೆ ನಾನು ಅಂತಹ ಕೆಲಸಕ್ಕೆ ಹೋಗಿಲ್ಲ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪುರುಷೋತ್ತಮ ಚಿತ್ರಾಪುರ, ನಾಗವೇಣಿ, ಹುಸೈನ್ ಕಾಟಿಪಳ್ಳ, ಉತ್ತಮ್ ಆಳ್ವ, ಕರುಣಾಕರ , ಅನಿತಾ ರಾಜ್, ರೇಷ್ಮಾ, ಫಿಲೋಮಿನಾ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News