×
Ad

ದ್ವೇಷ ಭಾಷಣ : 27 ಬಿಜೆಪಿ ಶಾಸಕರ ಮೇಲೆ ಆರೋಪ

Update: 2018-04-25 19:24 IST

ಹೊಸದಿಲ್ಲಿ, ಎ.25: ಸಾರ್ವಜನಿಕ ಕಾರ್ಯಕ್ರಮದಲ್ಲಿ ದ್ವೇಷಪೂರಿತ ಭಾಷಣ ಮಾಡಿದ ಆರೋಪ ಎದುರಿಸುತ್ತಿರುವವರಲ್ಲಿ ಬಿಜೆಪಿ ಜನಪ್ರತಿನಿಧಿಗಳು ಅಗ್ರಸ್ಥಾನದಲ್ಲಿದ್ದಾರೆ ಎಂದು ವರದಿ ತಿಳಿಸಿದೆ. ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್(ಎಡಿಆರ್) ಮತ್ತು ನ್ಯಾಷನಲ್ ಇಲೆಕ್ಷನ್ ವಾಚ್(ಎನ್‌ಇಡಬ್ಲ್ಯೂ) ಸಂಸ್ಥೆಗಳ ವರದಿಯ ಪ್ರಕಾರ ಹಾಲಿ 58 ಸಂಸದರು ಹಾಗೂ ಶಾಸಕರು ದ್ವೇಷಪೂರಿತ ಭಾಷಣ ಮಾಡಿದ ಆರೋಪ ಎದುರಿಸುತ್ತಿದ್ದು, ಇದರಲ್ಲಿ ಬಿಜೆಪಿಯ 27 ಸಂಸದರು ಹಾಗೂ ಶಾಸಕರಿದ್ದಾರೆ.

 ಆಲ್ ಇಂಡಿಯಾ ಮಜ್ಲಿಸೆ ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಹಾಗೂ ತೆಲಂಗಾಣ ರಾಷ್ಟ್ರಸಮಿತಿ(ಟಿಆರ್‌ಎಸ್)ನ ತಲಾ ಆರು ಜನಪ್ರತಿನಿಧಿಗಳು ಈ ಪಟ್ಟಿಯಲ್ಲಿದ್ದಾರೆ. ಸಂಸದರ ಪೈಕಿ ಎಐಎಂಐಎಂನ ಅಸಾದುದ್ದೀನ್ ಉವೈಸಿ , ಎಐಯುಡಿಎಫ್‌ನ ಬದ್ರುದ್ದೀನ್ ಅಜ್ಮಲ್ ಹಾಗೂ ಬಿಜೆಪಿಯ ಉಮಾ ಭಾರತಿ ತಮ್ಮ ವಿರುದ್ಧ ದ್ವೇಷಭಾಷಣ ಪ್ರಕರಣ ದಾಖಲಾಗಿರುವುದನ್ನು ಘೋಷಿಸಿಕೊಂಡಿದ್ದಾರೆ. ಒಟ್ಟು 15 ಸಂಸದರ ವಿರುದ್ಧ ಆರೋಪ ದಾಖಲಾಗಿದ್ದು, ಇವರಲ್ಲಿ 10 ಬಿಜೆಪಿಯವರು. ಎಐಯುಡಿಎಫ್, ಟಿಆರ್‌ಎಸ್, ಪಿಎಂಕೆ, ಎಐಎಂಐಎಂ ಹಾಗೂ ಎಸ್‌ಎಚ್‌ಎಸ್‌ನ ತಲಾ ಒಬ್ಬ ಸಂಸದರಿದ್ದಾರೆ. 43 ಶಾಸಕರ ಪೈಕಿ 17 ಬಿಜೆಪಿ ಶಾಸಕರು , ಟಿಆರ್‌ಎಸ್ ಮತ್ತು ಎಐಎಂಐಎಂನ ತಲಾ ಐದು ಶಾಸಕರು, ಟಿಡಿಪಿಯ ಮೂವರು, ಕಾಂಗ್ರೆಸ್, ಟಿಎಂಸಿ, ಜೆಡಿಯು, ಎಸ್‌ಎಚ್‌ಎಸ್‌ನ ತಲಾ ಇಬ್ಬರು, ಡಿಎಂಕೆ, ಬಿಎಸ್‌ಪಿ, ಎಸ್‌ಪಿಯ ತಲಾ ಒಬ್ಬರು ಹಾಗೂ ಇಬ್ಬರು ಪಕ್ಷೇತರ ಶಾಸಕರು. ರಾಜ್ಯಸಭೆಯ ಯಾವುದೇ ಸದಸ್ಯರ ವಿರುದ್ಧ ದ್ವೇಷಭಾಷಣದ ಆರೋಪವಿಲ್ಲ. ದ್ವೇಷಭಾಷಣದ ಪ್ರಕರಣ ತೆಲಂಗಾಣದಲ್ಲಿ ಅತ್ಯಧಿಕವಾಗಿದ್ದರೆ , ಬಿಹಾರ ಹಾಗೂ ಉತ್ತರಪ್ರದೇಶ ಆ ಬಳಿಕದ ಸ್ಥಾನದಲ್ಲಿವೆ. ತೆಲಂಗಾಣದಲ್ಲಿ 11 , ಬಿಹಾರ ಹಾಗೂ ಉತ್ತರಪ್ರದೇಶದಲ್ಲಿ ತಲಾ 9, ಮಹಾರಾಷ್ಟ್ರದಲ್ಲಿ 4, ಆಂಧ್ರ ಮತ್ತು ಕರ್ನಾಟಕದಲ್ಲಿ ತಲಾ ಮೂರು, ಉತ್ತರಾಖಂಡ ಮತ್ತು ಪ.ಬಂಗಾಲದ ತಲಾ ಒಬ್ಬ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿದೆ. ಚುನಾವಣೆಗೆ ಮೊದಲು ಹಾಗೂ ಚುನಾವಣೆ ಬಳಿಕ ದ್ವೇಷಪೂರಿತ ಭಾಷಣ ಮಾಡುವ ಅಭ್ಯರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ಅಲ್ಲದೆ ಚುನಾವಣೆಯಲ್ಲಿ ಆಯ್ಕೆಯಾದ ಬಳಿಕ ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಎಡಿಆರ್ ಶಿಫಾರಸು ಮಾಡಿದೆ. ಅಲ್ಲದೆ , ಅಭ್ಯರ್ಥಿ ಅಥವಾ ಆತನ ಪರವಾಗಿರುವವರು ದ್ವೇಷ ಭಾಷಣ ಮಾಡುವುದನ್ನು ನಿಷೇಧಿಸಿ ಮಾದರಿ ನೀತಿ ಸಂಹಿತೆಯಲ್ಲಿ ಪ್ರಕಟಿಸುವಂತೆ ಕಾನೂನು ಆಯೋಗವು ಮಾಡಿರುವ ಶಿಫಾರಸನ್ನು ಎಡಿಆರ್ ಬೆಂಬಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News