ಮೋದಿ ಹಿಂಬಾಲಕರ 'ಟ್ರೋಲ್ ಸೇನೆ'ಯ ಹಾವಳಿ: ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚಿಯಲ್ಲಿ ಭಾರತದ ಸ್ಥಾನ ಕುಸಿತ

Update: 2018-04-25 14:16 GMT

ಹೊಸದಿಲ್ಲಿ,ಎ.25: ಭಾರತವು 2018ನೇ ಸಾಲಿನಲ್ಲಿ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚಿಯಲ್ಲಿ 138ನೇ ಸ್ಥಾನಕ್ಕೆ ಕುಸಿದಿದೆ. ಅದು ಕಳೆದ ವರ್ಷ 136ನೇ ಸ್ಥಾನದಲ್ಲಿತ್ತು. ವಿಶ್ವಾದ್ಯಂತ ಪತ್ರಿಕಾ ಸ್ವಾತಂತ್ರದ ಬಗ್ಗೆ ನಿಗಾ ವಹಿಸಿರುವ ‘ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್(ಆರ್‌ಎಸ್‌ಎಫ್) ಬುಧವಾರ ತನ್ನ ವರದಿಯನ್ನು ಬಿಡುಗಡೆ ಗೊಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಹಿಂಬಾಲಕರ ‘ಟ್ರೋಲ್ ಸೇನೆ’ಯು ಸಾಮಾಜಿಕ ಮಾಧ್ಯಮಗಳಲ್ಲಿ ಪತ್ರಕರ್ತರನ್ನು ಗುರಿಯಾಗಿಸಿಕೊಂಡು ದ್ವೇಷ ಸಂದೇಶಗಳನ್ನು ಶೇರ್ ಮಾಡಿಕೊಂಡಿದ್ದು ಮತ್ತು ಈ ಅಭಿಯಾನವನ್ನು ತೀವ್ರಗೊಳಿಸಿದ್ದು ಸೂಚಿಯಲ್ಲಿ ಭಾರತದ ಸ್ಥಾನ ಕುಸಿಯಲು ಮುಖ್ಯ ಕಾರಣವಾಗಿದೆ ಎಂದು ವರದಿಯು ಬೆಟ್ಟು ಮಾಡಿದೆ.

ರಾಷ್ಟ್ರೀಯ ಚರ್ಚೆಯಿಂದ ‘ರಾಷ್ಟ್ರ ವಿರೋಧಿ ಚಿಂತನೆಯ ಎಲ್ಲ ಅಭಿವ್ಯಕ್ತಿಗಳನ್ನು ನಿರ್ಮೂಲನೆಗೊಳಿಸಲು ಹಿಂದು ರಾಷ್ಟ್ರವಾದಿಗಳು ಪ್ರಯತ್ನಿಸುತ್ತಿರುವುದರೊಂದಿಗೆ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಸ್ವ-ಸೆನ್ಸಾರ್‌ಶಿಪ್ ಹೆಚ್ಚುತ್ತಿದೆ ಮತ್ತು ಪತ್ರಕರ್ತರು ತೀವ್ರ ಮೂಲಭೂತವಾದಿ ರಾಷ್ಟ್ರವಾದಿಗಳ ದುರುದ್ದೇಶಪೂರಿತ ಆನ್‌ಲೈನ್ ಅಭಿಯಾನದ ಗುರಿಯಾಗುವುದು ಹೆಚ್ಚುತ್ತಿದೆ. ಈ ರಾಷ್ಟ್ರವಾದಿಗಳು ಪತ್ರಕರ್ತರನ್ನು ನಿಂದಿಸುತ್ತಿದ್ದಾರೆ ಮತ್ತು ಅವರಿಗೆ ದೈಹಿಕ ಬೆದರಿಕೆಗಳನ್ನೂ ಒಡ್ಡುತ್ತಿದ್ದಾರೆ ಎಂದು ಆರ್‌ಎಸ್‌ಎಫ್ ತನ್ನ ವರದಿಯಲ್ಲಿ ಹೇಳಿದೆ.

"2017ರಲ್ಲಿ ಬೆಂಗಳೂರಿನಲ್ಲಿ ಹತ್ಯೆಯಾದ ಗೌರಿ ಲಂಕೇಶ್ ಸೇರಿದಂತೆ ಕನಿಷ್ಠ ಮೂವರು ಪತ್ರಕರ್ತರು ತಮ್ಮ ಕಾರ್ಯಗಳಿಂದಾಗಿ ಹಿಂದೂ ರಾಷ್ಟ್ರವಾದಿಗಳ ಗುರಿಯಾಗಿದ್ದರು" ಎಂದು ವರದಿಯು ಉಲ್ಲೇಖಿಸಿದೆ.

ಸರಕಾರವನ್ನು ಟೀಕಿಸುವ ಪತ್ರಕರ್ತರ ಧ್ವನಿಯನ್ನಡಗಿಸಲು ಕಾನೂನು ಕ್ರಮಗಳೂ ನಡೆಯುತ್ತಿವೆ ಮತ್ತು ಕೆಲವು ಪ್ರಾಸಿಕ್ಯೂಟರ್‌ಗಳು ಐಪಿಸಿಯ ಕಲಂ 124 ಎ ಅನ್ನೂ ಹೇರುತ್ತಿದ್ದಾರೆ ಎಂದು ಹೇಳಿದೆ. ಈ ಕಲಮ್‌ನಡಿ ದೇಶದ್ರೋಹವು ಜೀವಾವಧಿ ಶಿಕ್ಷೆ ವಿಧಿಸಬಹುದಾದ ಅಪರಾಧವಾಗಿದೆ.

 ದೇಶದ್ರೋಹಕ್ಕಾಗಿ ಯಾವುದೇ ಪತ್ರಕರ್ತನನ್ನು ದೋಷಿಯೆಂದು ಈವರೆಗೆ ಘೋಷಿಸಿಲ್ಲವಾದರೂ ಅಂತಹ ಸಾಧ್ಯತೆಯಿರುವ ಭೀತಿಯಿಂದಾಗಿ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಸ್ವ-ಸೆನ್ಸಾರ್‌ಶಿಪ್ ಹೆಚ್ಚುತ್ತಿದೆ ಎಂದಿರುವ ವರದಿಯು,ಕೇಂದ್ರ ಸರಕಾರದ ಗುಪ್ತ ಸಮ್ಮತಿಯೊಂದಿಗೆ ಯೋಧರ ಹಿಂಸೆಗೆ ಕಾಶ್ಮೀರಿ ಪತ್ರಕರ್ತರು ಆಗಾಗ್ಗೆ ಗುರಿಯಾಗುತ್ತಿದ್ದಾರೆ ಎಂದೂ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News