ಹಾರ್ದಿಕ್ ಪಟೇಲ್‌ಗೆ ನೀಡಿದ್ದ ಭದ್ರತೆ ವಾಪಸ್ ಪಡೆದ ಕೇಂದ್ರ

Update: 2018-04-25 14:30 GMT

ಅಹ್ಮದಾಬಾದ್,ಎ.25: ಪಾಟಿದಾರ್ ಅನಾಮತ್ ಆಂದೋಲನ ಸಮಿತಿಯ ನಾಯಕ ಹಾರ್ದಿಕ್ ಪಟೇಲ್ ಅವರಿಗೆ ಒದಗಿಸಲಾಗಿದ್ದ ಭದ್ರತೆಯನ್ನು ಪುನರ್‌ಪರಿಶೀಲನೆಯ ಬಳಿಕ ಕೇಂದ್ರ ಸರಕಾರವು ಹಿಂದೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ. 2017,ನವೆಂಬರ್‌ನಲ್ಲಿ ಗುಪ್ತಚರ ಘಟಕವು(ಐಬಿ)ವು ಪಟೇಲ್‌ಗೆ ವೈ ಪ್ಲಸ್ ಭದ್ರತೆಯನ್ನು ಒದಗಿಸಿತ್ತು.

 ಕಳೆದ ವರ್ಷ ಗುಜರಾತ್ ವಿಧಾನಸಭಾ ಚುನಾವಣೆ ನಡೆದಾಗಿನಿಂದ ಬಿಜೆಪಿ ವಿರುದ್ಧ ಪ್ರಚಾರದಲ್ಲಿ ತೊಡಗಿಕೊಂಡಿರುವ ಹಾರ್ದಿಕ್‌ಗೆ ಎಂಟು ಸಶಸ್ತ್ರ ಸಿಐಎಸ್‌ಎಫ್ ಕಮಾಂಡೋಗಳ ರಕ್ಷಣೆಯನ್ನು ಒದಗಿಸಲಾಗಿತ್ತು. ಗೃಹ ಸಚಿವಾಲಯವು ಮಂಗಳವಾರ ಭದ್ರತೆ ಹಿಂದೆಗೆದುಕೊಳ್ಳುವ ಆದೇಶವನ್ನು ಹೊರಡಿಸಿದ್ದು, ಸಿಐಎಸ್‌ಎಫ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿದವು.

ಪಟೇಲ್ ಅವರ ಭದ್ರತೆಯ ಕುರಿತು ಪುನರ್‌ಪರಿಶೀಲನೆ ನಡೆಸಿದ ಐಬಿ ಅವರಿಗೆ ಯಾವುದೇ ಬೆದರಿಕೆಯಿಲ್ಲವೆಂದು ವರದಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ವನ್ನು ಕೈಗೊಳ್ಳಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೋರ್ವರು ತಿಳಿಸಿದರು.

 ತನ್ಮಧ್ಯೆ,ಇಂತಹ ಯಾವುದೇ ನಿರ್ಧಾರದ ಬಗ್ಗೆ ತನಗೆ ತಿಳಿದಿಲ್ಲ ಎಂದು ಹಾರ್ದಿಕ್ ತನ್ನನ್ನು ಸಂಪರ್ಕಿಸಿದ್ದ ಸುದ್ದಿಗಾರರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News