ಇಸ್ಲಾಂ ಧರ್ಮಕ್ಕೆ ಮತಾಂತರವಾದ ದಲಿತ ವ್ಯಕ್ತಿಗೆ ಹಲ್ಲೆಗೈದು ಗಡ್ಡ ಬೋಳಿಸಿದ ಸಂಘಪರಿವಾರ ಕಾರ್ಯಕರ್ತರು: ಆರೋಪ

Update: 2018-04-25 14:35 GMT

ಮೀರತ್, ಎ.25: ಇಪ್ಪತ್ತು ದಿನಗಳ ಹಿಂದೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ವೃತ್ತಿಯಲ್ಲಿ ವೆಲ್ಡರ್ ಆಗಿರುವ ಪವನ್ ಕುಮಾರ್ (34) ಎಂಬ ವ್ಯಕ್ತಿಗೆ ಸಂಘಪರಿವಾರ ಕಾರ್ಯಕರ್ತರು ಹಲ್ಲೆ ನಡೆಸಿ, ಗಡ್ಡ ಬೋಳಿಸಿದ ಘಟನೆ ಉತ್ತರ ಪ್ರದೇಶದ ಶಮ್ಲಿಯ ವಿಶ್ವಕರ್ಮ ಪ್ರದೇಶದಲ್ಲಿ ನಡೆದಿದೆ.

ಈ ಘಟನೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರೀ ಸುದ್ದಿ ಮಾಡಿದೆ. ಮತಾಂತರಗೊಂಡಂದಿನಿಂದ ಪವನ್ ಗಡ್ಡ ಬೆಳೆಸಿದ್ದರಲ್ಲದೆ ಟೋಪಿ ಧರಿಸಲು ಆರಂಭಿಸಿದ್ದರೆಂದು ಹೇಳಲಾಗಿದೆ. ತಾನು ಇಸ್ಲಾಂ ಬಗ್ಗೆ ಬಹಳಷ್ಟು ಓದಿ ಪ್ರಭಾವಿತನಾಗಿ ಆ ಧರ್ಮ ಸ್ವೀಕರಿಸಿದ್ದಾಗಿ ಪವನ್ ಹೇಳಿದ್ದಾರೆ. "ಯಾರೂ ನನ್ನನ್ನು ಬಲವಂತ ಪಡಿಸಿಲ್ಲ. ನನಗೆ ಮುಸ್ಲಿಮನಾಗಿಯೇ ಇರಬೇಕೆಂಬ ಆಸೆ ಇದೆ. ಆದರೆ ಸಂಘಪರಿವಾರ ಕಾರ್ಯಕರ್ತರು ನನ್ನ ಮೆಲೆ ಹಲ್ಲೆಗೈದು ನನ್ನ ಗಡ್ಡ ಬೋಳಿಸಿದ್ದಾರೆ" ಎಂದವರು ಆರೋಪಿಸಿದ್ದಾರೆ. ಇವರಿಗೆ ನಾಲ್ವರು ವಿವಾಹಿತ ಸೋದರಿಯರಿದ್ದು, ಹೆತ್ತವರು ತೀರಿಕೊಂಡಿರುವುದರಿಂದ ಒಂಟಿ ಜೀವನ ನಡೆಸುತ್ತಿದ್ದರು. 

"ಕೆಲ ಮುಸ್ಲಿಮರು ಉದ್ಯಮ ಆರಂಭಿಸಲು ಹಣ ನೀಡುವ ಆಮಿಷವೊಡ್ಡಿ ಆತನನ್ನು ಮತಾಂತರಿಸಿದ್ದಾರೆ. ಆತನಿಗೆ ವಧು ಹುಡುಕುವುದಾಗಿಯೂ ಭರವಸೆ ನೀಡಿದ್ದರಿಂದ ಮತಾಂತರಗೊಂಡಿದ್ದ. ಅವನೊಡನೆ ಸಮಾಲೋಚನೆ ನಡೆಸಿದ ನಂತರ ತನ್ನ ತಪ್ಪನ್ನು ಒಪ್ಪಿಕೊಂಡು ಆತ ಹಿಂದೂ ಧರ್ಮಕ್ಕೆ ಮರಳಲು ಒಪ್ಪಿದ್ದಾನೆ. ಅಂತೆಯೇ ಶುದ್ಧೀಕರಣ ಪ್ರಕ್ರಿಯೆ ನಡೆಸಲಾಗಿದೆ'' ಎಂದು ಸ್ಥಳೀಯ ಬಜರಂಗದಳ ನಾಯಕ ವಿವೇಕ್ ಪ್ರೇಮಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News