ಕ್ಷೇತ್ರದ ಜನತೆ ಮತ್ತೊಮ್ಮೆ ಆಶೀರ್ವಾದ ಮಾಡಿದರೆ ದುಪ್ಪಟ್ಟು ಅಭಿವೃದ್ಧಿ: ರಮಾನಾಥ ರೈ ಭರವಸೆ

Update: 2018-04-26 07:09 GMT

ಬಂಟ್ವಾಳ, ಎ.26: ಚುನಾವಣಾ ಪ್ರಚಾರಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಎ.27ರಂದು ಬೆಳಗ್ಗೆ 10ಕ್ಕೆ ಬಂಟ್ವಾಳದ ಬಿ.ಸಿ.ರೋಡ್‌ಗೆ ಆಗಮಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ, ಬಂಟ್ವಾಳ ವಿಧಾನಸಬಾ ಕ್ಷೇತ್ರದ ಕಾಂಗ್ರೆಸ್ ಅ್ಯರ್ಥಿ ಬಿ.ರಮಾನಾಥ ರೈ ತಿಳಿಸಿದ್ದಾರೆ.

ಗುರುವಾರ ಬಿ.ಸಿ.ರೋಡ್‌ನಲ್ಲಿರುವ ಪಕ್ಷದ ಕಾರ್ಯಾಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಎ.27ರಂದು ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಮೊಡಂಕಾಪು ಶಾಲಾ ಮೈದಾನಕ್ಕೆ ಆಗಮಿಸಿ, ನಂತರ ಬಿ.ಸಿ.ರೋಡ್ ಸರ್ಕಲ್ ಸಮೀಪ ಗೋಲ್ಡನ್ ಮೈದಾನದಲ್ಲಿ ನಡೆಯುವ ಬಹಿರಂಗ ಸಬೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕಾಂಗ್ರೆಸ್ ಮುಖಂಡ ಕೆ.ಸಿ.ವೇಣುಗೋಪಾಲ್ ಸಹಿತ ಇನ್ನಿತರ ರಾಜ್ಯ ಹಾಗೂ ಜಿಲ್ಲಾ ನಾಯಕರು ಇದರಲ್ಲಿ ಭಾಗವಹಿಸುವರು ಎಂದರು.

ಸಿಕ್ಕಿದ ಅವಕಾಶವನ್ನು ಕ್ಷೇತ್ರದ ಜನರ ಅಭಿವೃದ್ಧಿಗಾಗಿ ಸದುಪಯೋಗಪಡಿಸಿಕೊಂಡ ತೃಪ್ತಿ ತನಗಿದೆ. ಈ ಬಾರಿಯು ಮತದಾರರು ಗರಿಷ್ಠ ಮತಗಳಿಂದ ಆಶೀರ್ವಾದ ಮಾಡುವ ನಿರೀಕ್ಷೆಯಿದೆ. ಕ್ಷೇತ್ರದ ಜನರು ಮತ್ತೊಮ್ಮೆ ಆಶೀರ್ವಾದ ಮಾಡಿದರೆ ದುಪ್ಪಟ್ಟು ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ರಾಜ್ಯದಲ್ಲಿಯೇ ಬ್ರಹ್ಮಶ್ರೀ ನಾರಾಯಣ ಗುರು ಅವರ ಜಯಂತಿ ಆಚರಿಸುವ ಹೆಮ್ಮೆ ಬಂಟ್ವಾಳದ್ದು ಎಂದ ಅವರು, ಧಾರ್ಮಿಕ ಕ್ಷೇತ್ರಗಳಿಗೆ ಗರಿಷ್ಠ ಅನುದಾನವನ್ನು ನೀಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ತನ್ನ ಧರ್ಮವನ್ನು ಪ್ರೀತಿಸುವ ಮೂಲಕ ಇತರ ಧರ್ಮವನ್ನು ಗೌರವಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.

ಕಾಂಗ್ರೆಸ್-ಎಸ್‌ಡಿಪಿಐ ಮೈತ್ರಿ ಬಗ್ಗೆ ಮಾಹಿತಿ ಇಲ್ಲ
ರಾಜ್ಯದಲ್ಲಿ ಕಾಂಗ್ರೆಸ್-ಎಸ್‌ಡಿಪಿಐ ಮೈತ್ರಿ ಮಾಡಿಕೊಂಡಿದೆಯೇ ಎಂದು ಪತ್ರಕರ್ತರ ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ರೈ, ಈ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ. ಮೈತ್ರಿ ಹಾಗೂ ಬೆಂಬಲದ ಬಗ್ಗೆ ಪಕ್ಷದ ವರಿಷ್ಠರು ಯಾವುದೇ ಸೂಚನೆ ನೀಡಿಲ್ಲ. ಜಾತ್ಯತೀತ ಪಕ್ಷಕ್ಕೆ ಬೆಂಬಲ ನೀಡುವುದು ಅವರವರ ಅಭಿಪ್ರಾಯಕ್ಕೆ ಬಿಟ್ಟಿದ್ದು, ಈ ಬಗ್ಗೆ ಹೆಚ್ಚು ಮಾತನಾಡಲು ಇಚ್ಛಿಸುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News