ಮೋದಿಯವರೇ ‘ಬಿಜೆಪಿಗರಿಂದ ಬೇಟಿ ಬಚಾವೋ’ ಆಂದೋಲನ ಹಮ್ಮಿಕೊಳ್ಳಿ: ರಾಹುಲ್ ಗಾಂಧಿ

Update: 2018-04-26 16:19 GMT

ಭಟ್ಕಳ, ಎ.26: ದೇಶಕ್ಕೆ ‘ಬೇಟಿ ಬಚಾವೋ ಬೇಟಿ ಪಡಾವೋ’ ಘೋಷಣೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಇದೀಗ ‘ಬಿಜೆಪಿಗರಿಂದ ಬೇಟಿ ಬಚಾವೊ’ ಅಭಿಯಾನ ಹಮ್ಮಿಕೊಳ್ಳಲಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ. ಭಟ್ಕಳದ ಐಸ್ ಫ್ಯಾಕ್ಟರಿ ಬಳಿಯ ಮೈದಾನದಲ್ಲಿ ಗುರುವಾರ ಸಂಜೆ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿ ಅವರು ಮಾತನಾಡುತ್ತಿದ್ದರು.

ಆರೆಸ್ಸೆಸ್, ಬಿಜೆಪಿ ದೇಶದಲ್ಲಿ ದ್ವೇಷ ಹರಡುವಂತಹ ಕಾರ್ಯ ಮಾಡುತ್ತಿದೆ. ಭ್ರಷ್ಟರನ್ನು ಜೊತೆಗಿಟ್ಟುಕೊಂಡೆ ಭ್ರಷ್ಟಚಾರದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ ಈ ದೇಶವನ್ನು ತನ್ನ ಮಿತ್ರರಿಗೆ ಮಾರಿಕೊಂಡಿದ್ದಾರೆ ಎಂದು ರಾಹುಲ್ ಟೀಕಿಸಿದರು.
 
ಕೇವಲ 15 ಜನರ ಲಾಭಕ್ಕಾಗಿ ದೇಶದಲ್ಲಿ ನೋಟು ಅಮಾನ್ಯೀಕರಣಗೊಳಿಸಿದರು. ರೈತರಿಗೆ ಸಾಲಮನ್ನಾ ಮಾಡಿ ಎಂದರೆ ಬಂಡವಾಳಶಾಹಿಗಳ ಕೋಟಿ ಕೋಟಿ ರೂ. ಸಾಲಮನ್ನಾ ಮಾಡಿದರು. ಇದು ಈ ದೇಶ ಎತ್ತ ಸಾಗುತ್ತಿದೆ ಎನ್ನುವುದು ತೋರಿಸುತ್ತದೆ ಎಂದರು. ಬಿಜೆಪಿ ದೇಶದ ಯಾವುದೇ ಭಾಗದಲ್ಲಿ ಅಧಿಕಾರಕ್ಕೇರಿದರೂ ಅಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಪ್ರಧಾನಿ ‘ಮನ್ ಕಿ ಬಾತ್’ ಮೂಲಕ ಜನರನ್ನು ಮರಳು ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಕರ್ನಾಟಕದಲ್ಲಿ ನಡಯುವ ಚುನಾವಣೆಯು ಎರಡು ವಿಚಾರಧಾರೆಗಳ ನಡುವಿನ ಹೋರಾಟವಾಗಿದೆ. ಇಲ್ಲಿ ಬಡವರು ಬೆವರು ಸುರಿಸಿ ದುಡಿಯುತ್ತಾರೆ. ಅವರ ದುಡಿಮೆಗೆ ತಕ್ಕ ಬೆಲೆ ಸಿಗಬೇಕು ಇದು ಕಾಂಗ್ರೆಸ್ ವಿಚಾರಧಾರೆ. ಆದರೆ ಆರೆಸ್ಸೆಸ್, ಬಿಜೆಪಿ ಹೇಳುತ್ತದೆ ರಾಜ್ಯದ ಜನತೆಯ ಹಣ 10-15 ಉದ್ಯೋಗಪತಿಗಳ ಜೇಬು ತುಂಬಬೇಕು. ಇದು ಕಾಂಗ್ರೆಸ್ ಮತ್ತು ಬಿಜೆಪಿ, ಆರೆಸ್ಸೆಸ್ ನಡುವೆ ಇರುವ ವಿಚಾರಧಾರೆಯ ಅಂತರ ಎಂದರು.

ಸಿದ್ದರಾಮಯ್ಯ ಬಡವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಭ್ರಷ್ಟ ಬಿ.ಎಸ್.ಯಡಿಯೂರಪ್ಪರನ್ನು ಮುಂದಿಟ್ಟುಕೊಂಡು ಭ್ರಷ್ಟಚಾರ ತೊಲಗಿಸುವ ಮಾತನಾಡುವ ಮೋದಿಗೆ ಜೈಲಿಗೆ ಹೋಗಿ ಬಂದಿರುವ ವ್ಯಕ್ತಿಗಳು ಕಾಣಿಸುವುದಿಲ್ಲ ಎಂದು ಟೀಕಿಸಿದರು. ಸಂವಿಧಾನ ಬದಲಾವಣೆ ಹೇಳಿಕೆ ನೀಡುವವರು ಗ್ರಾಪಂ ಸದಸ್ಯನಾಗಲು ನಾಲಾಯಕ್ಕು
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಜನತೆ ದೊಡ್ಡ ತಪ್ಪು ಮಾಡಿದ್ದು ಹೊಲಸು ಚರಂಡಿಯಂತಾದ ನಾಲಗೆಯುಳ್ಳ ವ್ಯಕ್ತಿಯನ್ನು ಸಂಸದರನ್ನಾಗಿ ಮಾಡಿದ್ದೀರಿ. ಮುಂದಿನ ಬಾರಿ ಈ ತಪ್ಪು ಮರುಕಳಿಸದಂತೆ ನೋಡಿಕೊಳ್ಳಿ ಎಂದರು.

ಈ ದೇಶದ ಸಂವಿಧಾನ ಬದಲಿಸುವ, ದಲಿತರನ್ನು ಅವರ ತಂದೆತಾಯಿ ಯಾರು ಎಂದು ಕೇಳುವ ವ್ಯಕ್ತಿ ಗ್ರಾಮ ಪಂಚಾಯತ್ ಸದಸ್ಯನಾಗಲು ನಾಲಾಯಕ್ಕು ಎಂದರು. ಭ್ರಷ್ಟ ಯಡಿಯೂರಪ್ಪಯಾವುದೇ ಕಾರಣಕ್ಕೂ ಈ ರಾಜ್ಯದ ಮುಖ್ಯಮಂತ್ರಿಯಾಗಲು ಆರ್ಹರಲ್ಲ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಮೂಲಕ ಮತ್ತೆ ಬಡವರ ಪರ ಸರಕಾರವನ್ನು ಆರಿಸಿ ತನ್ನಿ ಎಂದು ಸಿದ್ದರಾಮಯ್ಯ ಕರೆ ನೀಡಿದರು. ವೇದಿಕೆಯಲ್ಲಿ ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಆರ್.ವಿ.ದೇಶಪಾಂಡೆ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News