ಮಂಗಳೂರು: ಕಳವು ಪ್ರಕರಣ ಸಾಬೀತು: ಮಹಿಳೆ ಸಹಿತ ಇಬ್ಬರಿಗೆ 4 ವರ್ಷ ಜೈಲು ಶಿಕ್ಷೆ

Update: 2018-04-26 16:37 GMT

ಮಂಗಳೂರು, ಎ.26: ನಗರದ ದೇರೆಬೈಲ್ ಕೊಂಚಾಡಿ ನಾಗಕನ್ನಿಕ ದೇವಸ್ಥಾನ ರಸ್ತೆಯ ಬಳಿ ಬಿಲ್ಡರ್ ನರಸಿಂಹ ರಾವ್ ಎಂಬವರ ಮನೆಯಿಂದ ಕಳ್ಳತನ ಮಾಡಿದ ಪ್ರಕರಣದ ಮಹಿಳೆ ಸಹಿತ ಇಬ್ಬರು ಅಪರಾಧಿಗಳಿಗೆ ಮಂಗಳೂರಿನ 3ನೆ ಹೆಚ್ಚುವರಿ ಸಿಜೆ ಮತ್ತು ಪ್ರಥಮ ದರ್ಜೆ ನ್ಯಾಯಾಲಯ ತಲಾ 4 ವರ್ಷ ಸಾದಾ ಶಿಕ್ಷೆ ವಿಧಿಸಿ ಗುರುವಾರ ತೀರ್ಪು ನೀಡಿದೆ.

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಳ್ಳಿದಾರು ಓಣಿ ನಿವಾಸಿಗಳಾದ ಅಂಬಣ್ಣ ಬಸಪ್ಪ ಜಾಡರ್ ಯಾನೆ ಅಂಬರೀಶ್ (28), ರಶೀದಾ ಯಾನೆ ಕಾಜಿ (25) ಶಿಕ್ಷೆಗೊಳಗಾದವರು. ಇವರಿಬ್ಬರು ದಂಪತಿ ಎಂದು ಹೇಳಿಕೊಂಡಿದ್ದರು. ಆದರೆ ಪೊಲೀಸ್ ತನಿಖೆಯಿಂದ ದಂಪತಿ ಅಲ್ಲ ಎಂಬುದು ಬಹಿರಂಗಗೊಂಡಿತ್ತು. ಅಕ್ರಮವಾಗಿ ಮನೆಗೆ ಪ್ರವೇಶ ಮಾಡಿರುವುದಕ್ಕೆ 3 ವರ್ಷ ಸಾದಾ ಜೈಲು ಶಿಕ್ಷೆ, ತಲಾ 1 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 15 ದಿನ ಸಜೆ, ಕಳವು ಪ್ರಕರಣದಲ್ಲಿ 4 ವರ್ಷ ಸಾದಾ ಜೈಲು ಶಿಕ್ಷೆ, ತಲಾ 2 ಸಾವಿರ ರೂ. ದಂಡ. ದಂಡ ತೆರಲು ತಪ್ಪಿದರೆ 15 ದಿನ ಜೈಲು ಶಿಕ್ಷೆ ವಿಧಿಸಿ ನ್ಯಾಯಾಧೀಶೆ ಪುಷ್ಪಲತಾ ತೀರ್ಪು ನೀಡಿದ್ದಾರೆ.

ಕಳವು ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿದ್ದ ಅಂಬರೀಶ್ ಜಾಮೀನಿನ ಬಿಡುಗಡೆಗೊಂಡರೂ ಮತ್ತೆ ಕಳವು ಕೃತ್ಯದಲ್ಲಿ ತೊಡಗಿದ್ದ. ಆ ಬಳಿಕ ಬಾಡಿ ವಾರಂಟ್ ಪಡೆದು ಮಂಗಳೂರು ಜೈಲಿನಲ್ಲಿ ಇಡಲಾಗಿತ್ತು. ರಶೀದಾಳಿಗೆ ಜಾಮೀನು ಆಗಿರಲಿಲ್ಲ. ಇದುವರೆಗೆ ಜೈಲಿನಲ್ಲಿದ್ದ ಅವಧಿಯನ್ನು ಕಳೆದು ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನಲೆ: ಬಿಲ್ಡರ್ ನರಸಿಂಹ ರಾವ್ ಮನೆ ಕೆಲಸಕ್ಕೆ ಜನ ಬೇಕಾಗಿದ್ದಾರೆ ಎಂದು ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದರು. ಜಾಹೀರಾತು ನೋಡಿ ದಂಪತಿ ಎಂದು ಹೇಳಿಕೊಂಡ ಇಬ್ಬರು 2016ರ ಜೂನ್ 22ರಂದು ಕೆಲಸಕ್ಕೆ ಬಂದಿರುವುದಾಗಿ ಹೇಳಿಕೊಂಡಿದ್ದರು. ಮನೆ ಮಾಲಕರು ಇಬ್ಬರನ್ನೂ ಕೆಲಸಕ್ಕಿಟ್ಟು ವಾಸ ಮಾಡಲು ಮನೆಯ ಹಿಂಬದಿ ವ್ಯವಸ್ಥೆ ಕಲ್ಪಿಸಿದ್ದರು.

ಜುಲೈ 2ರಂದು ನರಸಿಂಹ ರಾವ್ ಹಾಗೂ ಅವರ ಪತ್ನಿ ಗೀತಾ ಎನ್. ರಾವ್ ಸಂಬಂಧಿಕರ ಮನೆಗೆ ತೆರಳಿದ್ದರು. ರಾತ್ರಿ 9 ಗಂಟೆಗೆ ಹಿಂದಿರುಗಿದಾಗ ಮನೆಯ ಬಾಗಿಲು ಮುರಿದಿತ್ತು. ನೋಡಿದಾಗ 18 ಲಕ್ಷ ರೂ. ಹಾಗೂ ಮೂರು ಮೊಬೈಲ್ ಪೋನ್‌ಗಳನು ಕಳವಾಗಿದ್ದವು. ಇದೇ ಸಮಯ ಕೆಲಸದವರು ನಾಪತ್ತೆಯಾಗಿದ್ದರು. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಎಸಿಪಿ ಉದಯ ನಾಯಕ್ ನೇತೃತ್ವದಲ್ಲಿ ತನಿಖೆ ಆರಂಭಿಸಿದ ಪೊಲೀಸರು ಬಿಲ್ಡರ್ ಮನೆಯ ಆವರಣದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಕೆಲಸದವರು ಕಳ್ಳತನ ಮಾಡಿರುವುದು ಸ್ಪಷ್ಟವಾಗಿತ್ತು. ಆದರೆ ಅವರು ಹೆಸರು, ವಿಳಾಸ ಬರೆದಿಟ್ಟ ಡೈರಿಯನ್ನು ಕೊಂಡೊಯ್ದಿದ್ದರು. ಕೆಲಸಕ್ಕೆ ಸೇರುವಾಗ ಶಿವ ಹಾಗೂ ಜ್ಯೋತಿ ಎಂದು ಸುಳ್ಳು ಹೆಸರು ನೀಡಿದ್ದರು.

ಕಾವೂರು ಅಂದಿನ ಇನ್‌ಸ್ಪೆಕ್ಟರ್ ನಟರಾಜ್ ಹಾಗೂ ಪಿಎಸ್ಸೈ ಉಮೇಶ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಒಟ್ಟು 12 ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು. ಸರಕಾರಿ ಹಿರಿಯ ಸಹಾಯಕ ಅಭಿಯೋಜಕ ಮಾರುತಿ ಡೊಕನ್ನಾ ಮಾಂಗ್ಲಿ ಸರಕಾರದ ಪರವಾಗಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News