ರೆಸ್ಟೋರೆಂಟ್‌ಗಳು ನಿಮ್ಮನ್ನು ಹೀಗೆ ಮೂರ್ಖರನ್ನಾಗಿಸುತ್ತಿವೆ...ಎಚ್ಚರವಿರಲಿ

Update: 2018-04-26 17:01 GMT

ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಲ್ಲಿ ವಿಧಿಸುವ ಸರ್ವಿಸ್ ಚಾರ್ಜ್ ಅಥವಾ ಸೇವಾ ಶುಲ್ಕ ಕಡ್ಡಾಯವಲ್ಲ ಮತ್ತು ಗ್ರಾಹಕರು ಅದನ್ನು ಪಾವತಿಸಲು ನಿರಾಕರಿಸಬಹುದು ಅಥವಾ ಭಾಗಶಃ,ತಮಗೆ ಇಷ್ಟ ಬಂದಷ್ಟು ಪಾವತಿಸಬಹುದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ವರ್ಷದ ಹಿಂದೆಯೇ ಸ್ಪಷ್ಟಪಡಿಸಿದೆ. ಆದರೆ ಈಗಲೂ ಹಲವಾರು ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್ ಗಳು ಗ್ರಾಹಕರ ಒಪ್ಪಿಗೆ ಪಡೆದುಕೊಳ್ಳದೆ ಬಿಲ್‌ನಲ್ಲಿ ಶೇ.5ರಿಂದ ಶೇ.20ರವರೆಗೂ ಸೇವಾಶುಲ್ಕವನ್ನು ಸೇರಿಸುತ್ತಿವೆ. ಶೇ.36ರಷ್ಟು ಗ್ರಾಹಕರು ಈ ಬಗ್ಗೆ ಅರಿವಿಲ್ಲದೆ ಸೇವಾಶುಲ್ಕವನ್ನು ಪಾವತಿಸುತ್ತಿದ್ದಾರೆ ಮತ್ತು ಕೇವಲ ಶೇ.10ರಷ್ಟು ಗ್ರಾಹಕರು ತಕರಾರು ಎತ್ತಿ ಬಿಲ್‌ನಿಂದ ಸೇವಾಶುಲ್ಕವನ್ನು ಹಿಂದೆಗೆದುಕೊಳ್ಳುವಂತೆ ಮಾಡುತ್ತಾರೆ ಎನ್ನುವುದು ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.

ಸೇವಾಶುಲ್ಕದ ಕುರಿತು ಸರಕಾರದ ಹೇಳಿಕೆಯು ಒಂದು ನಿರ್ದೇಶ ವಾಗಿದೆಯೇ ಹೊರತು ಅದು ಕಾನೂನಲ್ಲ,ಹೀಗಾಗಿ ರೆಸ್ಟೋರೆಂಟ್‌ಗಳು ಬಿಲ್‌ನಲ್ಲಿ ಸೇವಾಶುಲ್ಕವನ್ನು ಸೇರಿಸುವದು ಸಂಪೂರ್ಣವಾಗಿ ಕಾನೂನು ಬಾಹಿರವೇನಲ್ಲ. ಆದರೆ ನೀವು ಇದರ ವಿರುದ್ಧ ಧ್ವನಿಯೆತ್ತಲು ಮತ್ತು ಬಿಲ್‌ನಿಂದ ಸೇವಾಶುಲ್ಕವನ್ನು ವಜಾಗೊಳಿಸಲು ನಿರ್ಧರಿಸಿದರೆ ರೆಸ್ಟೋರೆಂಟ್‌ಗಳು ನಿರಾಕರಿಸುವಂತಿಲ್ಲ.

ಹೆಚ್ಚಿನ ಪ್ರಕರಣಗಳಲ್ಲಿ ಕೆಲವು ರೆಸ್ಟೋರಂಟ್‌ಗಳು ಸೇವಾಶುಲ್ಕವನ್ನು ವಜಾಗೊಳಿಸುವ ಗ್ರಾಹಕರ ಮನವಿಗಳನ್ನು ನಿರಾಕರಿಸುವ ಉಪಾಯ ವಾಗಿ ‘ಸೇವಾಶುಲ್ಕವನ್ನು ವಿಧಿಸಲಾಗುತ್ತದೆ’ ಎಂದು ಫಲಕವನ್ನು ಪ್ರದರ್ಶಿಸಿರುತ್ತವೆ ಅಥವಾ ಮೆನುಕಾರ್ಡ್‌ನಲ್ಲಿ ಮುದ್ರಿಸಿರುತ್ತವೆ. ಇಂತಹ ಪ್ರಕರಣಗಳಲ್ಲಿ ಸಹ ಗ್ರಾಹಕರು ಸೇವಾಶುಲ್ಕವನ್ನು ಪಾವತಿಸ ದಿರುವ ಹಕ್ಕನ್ನು ಹೊಂದಿರುತ್ತಾರೆ.

ಹೆಚ್ಚಿನ ರೆಸ್ಟೋರೆಂಟ್‌ಗಳು ಈಗಲೂ ಬಿಲ್‌ನಲ್ಲಿ ಸೇವಾಶುಲ್ಕವನ್ನು ಸೇರಿಸುತ್ತವೆ ಮತ್ತು ಅದನ್ನು ಪಾವತಿಸುವಂತೆ ಗ್ರಾಹಕರನ್ನು ಬಲವಂತಗೊಳಿಸುತ್ತವೆ. ಸೇವಾಶುಲ್ಕವನ್ನು ಪಾವತಿಸಲು ನಿರಾಕರಿಸುವವರ ಸಂಖ್ಯೆ ಪ್ರತಿ ತಿಂಗಳೂ ಹೆಚ್ಚುತ್ತಿದೆಯಾದರೂ ಅದು ಈಗಲೂ ತುಂಬ ಕಡಿಮೆಯೇ ಇದೆ. ಸಮೀಕ್ಷೆಗೊಳಪಟ್ಟ 8,013 ಜನರಲ್ಲಿ ಶೇ.36ರಷ್ಟು ಜನರಿಗೆ ಸರ್ವ ಮಾಡಿದ ವ್ಯಕ್ತಿಗೆ ಟಿಪ್ಸ್ ನೀಡಿದ ಬಳಿಕ ಬಿಲ್‌ನಲ್ಲಿಯೂ ತಾವು ಸೇವಾಶುಲ್ಕನ್ನು ಪಾವತಿಸುತ್ತಿದ್ದೇವೆ ಎನ್ನುವುದೇ ಗೊತ್ತಿಲ್ಲ. ಶೇ.27 ರಷ್ಟು ಜನರು ಬಿಲ್‌ನಲ್ಲಿ ಸೇವಾಶುಲ್ಕವನ್ನು ಗಮನಿಸಿಯೂ ಅದನ್ನು ಪಾವತಿಸಿದ್ದಾರೆ.

  ಆರಾಮವಾಗಿ ಕಾಲ ಕಳೆಯುವ ಉದ್ದೇಶದಿಂದ ರೆಸ್ಟೋರೆಂಟ್‌ಗಳಿಗೆ ಕುಟುಂಬ ಸಹಿತ ತೆರಳುವ ಹೆಚ್ಚಿನವರು ಜಗಳ ಮಾಡುವ ಗೋಜಿಗೆ ಹೋಗುವುದಿಲ್ಲ,ಸುಮ್ಮನೆ ಸೇವಾಶುಲ್ಕವನ್ನು ಪಾವತಿಸುತ್ತಾರೆ. ಕೇಂದ್ರ ಸರಕಾರದ ಸ್ಪಷ್ಟ ನಿರ್ದೇಶವಿದ್ದರೂ ಸೇವಾಶುಲ್ಕ ಕುರಿತು ಈಗಲೂ ವಾಗ್ವಾದಗಳು ಉಂಟಾಗುತ್ತಿರುವುದು ನಿಜಕ್ಕೂ ದುರದೃಷ್ಟಕರ. ಹೊಸ ಗ್ರಾಹಕ ರಕ್ಷಣಾ ಮಸೂದೆ ಅಂಗೀಕಾರಗೊಂಡ ಬಳಿಕ ಇದಕ್ಕೊಂದು ಬ್ರೇಕ್ ಬೀಳಬಹುದು ಎಂಬ ಆಶಯ ವ್ಯಕ್ತಪಡಿಸಿದ್ದಾರೆ ಸಮೀಕ್ಷೆಯನ್ನು ಕೈಗೊಂಡಿದ್ದ ‘ಲೋಕಲ್ ಸರ್ಕಲ್ಸ್’ನ ಸಚಿನ್ ತಪಾರಿಯಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News