ಬಿಜೆಪಿ ಸೋಲಿನ ಭೀತಿಯಿಂದ ಮಾಟ-ಮಂತ್ರದ ದಾರಿ ಹಿಡಿದಿದೆ: ಐವನ್ ಆರೋಪ

Update: 2018-04-26 18:03 GMT

ಬೆಳ್ತಂಗಡಿ, ಎ.26: ಚುನಾವಣಾ ಸೋಲಿನ ಭಯದಲ್ಲಿರುವ ಬಿಜೆಪಿಯವರು ಮಾಟ ಮಂತ್ರದ ದಾರಿ ಹಿಡಿದಿದ್ದಾರೆ. ಆದರೆ ಜಿಲ್ಲೆಯಲ್ಲಿ ಎಲ್ಲ ಎಂಟು ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವನ್ನು ಪಡೆಯಲಿದೆ. ಅವರ ಮಾಟ ಮಂತ್ರಗಳು ಅವರಿಗೇ ತಿರುಗಿ ಬೀಳಲಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದ್ದಾರೆ.

ಬೆಳ್ತಂಗಡಿಯ ಪತ್ರಿಕಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳ್ತಂಗಡಿಯಲ್ಲಿ ಜನಪ್ರಿಯ ನಾಯಕರಾಗಿರುವ ವಸಂತ ಬಂಗೇರ ಅವರನ್ನು ಎದುರಿಸುವ ಶಕ್ತಿಯಿಲ್ಲದೆ ಕಾಂಗ್ರೆಸ್ ಮುಖಂಡರು ಮನೆ ಮುಂದೆ ಮಾಟ ಮಂತ್ರ ಮಾಡುವ ಹೀನ ಮಟ್ಟಕ್ಕೆ ಇಳಿದಿರುವುದು ಖಂಡನೀಯ ಎಂದರು.

ರಾಜ್ಯ ಸರಕಾರ ಮಾಡಿರುವ ಸಾಧನೆಗಳು ಕಾಂಗ್ರೆಸ್ ಪಕ್ಷಕ್ಕೆ ಶ್ರೀ ರಕ್ಷೆಯಾಗಿದ್ದು ಅದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಚುನಾವಣಾ ಕಣಕ್ಕೆ ಇಳಿದಿದೆ. ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದರು.

ಬಿಜೆಪಿಯಲ್ಲಿ ನಾಯಕರೇ ಇಲ್ಲವಾಗಿದ್ದು ಯಾವ ಸಮೀಕ್ಷೆಯೂ ಅವರ ಪರವಾಗಿ ಬರುತ್ತಿಲ್ಲ. ಎಲ್ಲರೂ ಕಾಂಗ್ರೆಸ್ ಗೆಲುವನ್ನೇ ಹೇಳುತ್ತಿದ್ದು, ಬಿಜೆಪಿಯವರೇ ಯಡಿಯೂರಪ್ಪ ಅವರನ್ನು ಮುಗಿಸುವ ಸಂಚು ನಡೆಸುತ್ತಿದ್ದಾರೆ. ಶ್ರೀರಾಮುಲು ಅವರಂತಹ ಭ್ರಷ್ಟರನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವ ಸ್ಥಿತಿಗೆ ಬಿಜೆಪಿ ಬಂದಿದೆ ಎಂದ ಅವರು ಜಿಲ್ಲೆಯಲ್ಲೂ ಬಿಜೆಪಿ ಒಡೆದ ಮನೆಯಾಗಿದ್ದು, ಅವರಿಗೆ ಸೋಲಿನ ಭಯ ಕಾಡುತ್ತಿದೆ ಎಂದರು.

ರಾಹುಲ್ ಗಾಂಧಿ ಎ.27ರಂದು ದ.ಕ. ಜಿಲ್ಲೆಗೆ ಆಗಮಿಸುತ್ತಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವೀಕ್ಷಕರಾದ ಕೆ.ಸಿ ವೇಣುಗೋಪಾಲ್, ವಿಷ್ಣುನಾಥನ್ ಹಾಗೂ ಇತರ ಮುಖಂಡರು ಆಗಮಿಸಲಿದ್ದಾರೆ ಎಂದು ಐವನ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಹಾಗೂ ಬೆಳ್ತಂಗಡಿ ವೀಕ್ಷಕಿ ಸವಿತಾ ರಮೇಶ್, ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಶ್ರೀನಿವಾಸ ವಿ. ಕಿಣಿ, ಮುಖಂಡರಾದ ಲೋಕೇಶ್ವರಿ ವಿನಯಚಂದ್ರ, ಪ್ರಮೋದ್ ಕುಮಾರ್ ರೈ, ಅಲೋಶಿಯಸ್ ಲೋಬೊ, ಫ್ರಾನ್ಸಿಸ್ ವಿ.ವಿ., ಎ.ಸಿ.ಜಯರಾಜ್, ಜೆಸಿಂತಾ ಮೋನಿಸ್, ರಾಜಶೇಖರ ಶೆಟ್ಟಿ, ಎ.ಸಿ.ಮ್ಯಾಥ್ಯೂ, ಅಜಯ್, ಅಬ್ದುಲ್ ಕರೀಂ ಹಾಗೂ ಇತರರು ಉಪಸ್ಥಿತರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News