ಏಮ್ಸ್ ನಿವಾಸಿ ವೈದ್ಯರ ಮುಷ್ಕರ: ಸೇವೆಗಳಿಗೆ ಭಾಗಶಃ ವ್ಯತ್ಯಯ

Update: 2018-04-27 15:24 GMT

ಹೊಸದಿಲ್ಲಿ,ಎ.27: ತಮ್ಮ ಸಹೋದ್ಯೋಗಿಗೆ ಹಿರಿಯ ವೈದ್ಯರೋರ್ವರು ಹಲ್ಲೆ ನಡೆಸಿರುವ ಹಿನ್ನೆಲೆಯಲ್ಲಿ ಇಲ್ಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್)ಯ ನಿವಾಸಿ ವೈದ್ಯರ ಸಂಘ(ಆರ್‌ಡಿಎ)ವು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು,ಶುಕ್ರವಾರ ವೈದ್ಯಕೀಯ ಸೇವೆಗಳು ಭಾಗಶಃ ವ್ಯತ್ಯಯಗೊಂಡಿದ್ದವು.

ತುರ್ತು ಚಿಕಿತ್ಸೆ ಮತ್ತು ತೀವ್ರ ನಿಗಾ ಘಟಕಗಳು ಎಂದಿನಂತೆ ಕಾರ್ಯಾಚರಿಸಿದ ವಾದರೂ ಎಲ್ಲ ದೈನಂದಿನ ಶಸ್ತ್ರಚಿಕಿತ್ಸೆಗಳನ್ನು ರದ್ದುಗೊಳಿಸಲಾಗಿತ್ತು. ಹೊರರೋಗಿ ವಿಭಾಗವನ್ನು ಪೂರ್ವ ನಿರ್ಧರಿತ ಭೇಟಿಯ ಸಮಯವನ್ನು ಹೊಂದಿದ್ದ ಹಳೆಯ ರೋಗಿಗಳಿಗೆ ಮಾತ್ರ ತೆರೆಯಲಾಗಿದ್ದು,ಪರಿಸ್ಥಿತಿ ಸಹಜಗೊಳ್ಳುವವರೆಗೆ ಇದು ಮುಂದುವರಿಯಲಿದೆ. ಎಲ್ಲ ಶೈಕ್ಷಣಿಕ ಚಟುವಟಿಕೆಗಳು ಮತ್ತು ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಹಿರಿಯ ಆಡಳಿತಾಧಿಕಾರಿ ಯೋರ್ವರು ತಿಳಿಸಿದರು.

ಆಸ್ಪತ್ರೆಯ ಆಡಳಿತವು ರೋಗಿಗಳನ್ನು ನೋಡಿಕೊಳ್ಳಲು ತುರ್ತು ಯೋಜನೆಯೊಂದನ್ನು ಜಾರಿಗೊಳಿಸಿದ್ದು, ಎಲ್ಲ ಕ್ಲಿನಿಕಲ್ ವಿಭಾಗಗಳಲ್ಲಿಯ ಬೋಧಕರನ್ನು ಒಳರೋಗಿಗಳ ವಾರ್ಡ್‌ಗಳಲ್ಲಿ ನಿಯೋಜಿಸಲಾಗಿದೆ. ತುರ್ತು ಪ್ರಕರಣಗಳಲ್ಲಿ ಮಾತ್ರ ಶಸ್ತ್ರಚಿಕಿತ್ಸೆಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ.

ಹಿರಿಯ ವೈದ್ಯರು ತನ್ನ ಸಹಾಯಕ ವೈದ್ಯರ ಮೇಲೆ ಹಲ್ಲೆಗೈದ ಘಟನೆಯು ಬುಧವಾರ ನಡೆದಿದ್ದು,ಇದಕ್ಕಾಗಿ ಅವರು ಕ್ಷಮೆ ಯಾಚಿಸಿದ್ದಾರೆ ಎಂದು ಏಮ್ಸ್ ಶುಕ್ರವಾರ ರಾತ್ರಿ ಹೇಳಿಕೆಯಲ್ಲಿ ತಿಳಿಸಿದೆ.

ವಿಭಾಗ ಮುಖ್ಯಸ್ಥರೂ ಆಗಿರುವ ಹಿರಿಯ ವೈದ್ಯರನ್ನು ತಕ್ಷಣ ಅಮಾನತು ಗೊಳಿಸಬೇಕು. ಅವರು ಸಂಶೋಧನಾ ವಿದ್ಯಾರ್ಥಿಗಳಿಗೆ ಬೋಧಿಸಲು ಮತ್ತು ಯಾವುದೇ ಮೌಖಿಕ ಮತ್ತು ಲಿಖಿತ ಪರೀಕ್ಷೆಗಳನ್ನು ನಡೆಸಲು ಅವಕಾಶ ನೀಡಬಾರದು ಎಂದು ಆರ್‌ಡಿಎ ಆಗ್ರಹಿಸಿದೆ.

ಪ್ರತಿಭಟನೆಯ ಸಂಕೇತವಾಗಿ ಕಿರಿಯ ವೈದ್ಯರು ಗುರುವಾರ ತಲೆಗೆ ಹೆಲ್ಮೆಟ್ ಧರಿಸಿಕೊಂಡು ಕಾರ್ಯ ನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News