12 ವರ್ಷಕ್ಕಿಂತ ಕೆಳಗಿನ ಬಾಲಕರ ಮೇಲಿನ ಲೈಂಗಿಕ ದೌರ್ಜನ್ಯಕ್ಕೂ ಮರಣದಂಡನೆ ?

Update: 2018-04-27 16:11 GMT

ಹೊಸದಿಲ್ಲಿ, ಎ. 27: ಹನ್ನೆರೆಡು ವರ್ಷಕ್ಕಿಂತ ಕೆಳಗಿನ ಬಾಲಕಿಯರ ಮೇಲಿನ ಅತ್ಯಾಚಾರ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವ ಕ್ರಿಮಿನಲ್ ಕಾನೂನು (ತಿದ್ದುಪಡಿ) ಆಧ್ಯಾದೇಶ-2018ನ್ನು ತಂದ ಕೆಲವು ದಿನಗಳ ಬಳಿಕ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಇದೇ ಪ್ರಾಯದ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರಿಗೆ ಇದೇ ರೀತಿಯ ಶಿಕ್ಷೆ ವಿಧಿಸುವಂತೆ ಸಂಪುಟದ ಅನುಮತಿ ಕೋರಲು ಸಿದ್ಧತೆ ನಡೆಸಿದೆ.

ಎಪ್ರಿಲ್ 22ರ ಆಧ್ಯಾದೇಶ ಅತ್ಯಾಚಾರಕ್ಕೆ ಶಿಕ್ಷೆ ವಿಧಿಸುವ ಭಾರತೀಯ ದಂಡ ಸಂಹಿತೆಯ 376ನೇ ಪರಿಚ್ಛೇದಕ್ಕೆ ತಿದ್ದುಪಡಿ ತಂದಿದೆ. 18 ವರ್ಷಕ್ಕಿಂತ ಕೆಳಗಿನ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ನಿಭಾಯಿಸಲು 2012ರಲ್ಲಿ ವಿಶೇಷ ಕಾಯ್ದೆ ಪೋಕ್ಸೋ ಜಾರಿಗೆ ತರಲಾಗಿತ್ತು. ಭಾರತೀಯ ದಂಡ ಸಂಹಿತೆಯ ಪರಿಚ್ಛೇದದ ತಿದ್ದುಪಡಿ 12 ವರ್ಷದ ಕೆಳಗಿನ ಮಕ್ಕಳಿಗೆ ಕೂಡ ಅನ್ವಯವಾಗುತ್ತದೆ.  ಪೋಕ್ಸೋದಲ್ಲಿ ಲಿಂಗತ್ವ ಸ್ಥಿರವಾಗಿತ್ತು. ಆದರೆ, 376 ಪರಿಚ್ಛೇದದ ತಿದ್ದುಪಡಿಯಲ್ಲಿ ‘ಮಹಿಳೆ’ ಎಂಬ ಪದ ಇದೆ. ಇದರ ಅರ್ಥ 12 ವರ್ಷಕ್ಕಿಂತ ಕೆಳಗಿನ ಪ್ರಾಯದ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ ಈ ಕಾಯ್ದೆ ಅನ್ವಯವಾಗುವುದಿಲ್ಲ.

‘‘ಇದರ ಫಲಿತಾಂಶ ಬಾಲಕಿ ಹಾಗೂ ಬಾಲಕನ ಮೇಲೆ ಒಂದೇ ರೀತಿಯ ಅಪರಾಧ ನಡೆದರೂ ಪ್ರತ್ಯೇಕವಾಗಿ ಪರಿಭಾವಿಸುವ ಅಸಂಗತತೆ. 12 ವರ್ಷದ ಕೆಳಗಿನ ವಯಸ್ಸಿನ ಬಾಲಕಿಯರ ಅತ್ಯಾಚಾರಿಗಳನ್ನು ಮಾತ್ರ ಶಿಕ್ಷಿಸುವ ಆದ್ಯಾದೇಶ ಲಿಂಗತ್ವ ಸ್ಥಿರವಾಗುಳ್ಳ ಪೋಕ್ಸೋಗೆ ವಿರೋಧಾಭಾಸ ಹೊಂದಿದೆ’’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

12 ವರ್ಷಕ್ಕಿಂತ ಕೆಳಗಿನ ಯಾವುದೇ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ ಆರೋಪಿಗೆ ಮರಣದಂಡನೆ ವಿಧಿಸಲು ಮಹಿಳಾ ಮತ್ತು ಮಕ್ಕಳ ಸಚಿವಾಲಯ ಪೋಕ್ಸೋ ಕಾಯ್ದೆಯ 4, 5, 6 ಪರಿಚ್ಛೇದಕ್ಕೆ ತಿದ್ದುಪಡಿ ತರಲು ಪ್ರಸ್ತಾಪವನ್ನು ಅಂತಿಮಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News