ಅಯೋಧ್ಯೆ ಪ್ರಕರಣವು ‘ಆಸ್ತಿ ವಿವಾದ’: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಹಿಂದೂ ಸಂಸ್ಥೆಗಳು

Update: 2018-04-27 16:41 GMT

ಹೊಸದಿಲ್ಲಿ, ಎ. 27: ಅಯೋಧ್ಯೆಯಲ್ಲಿರುವ ರಾಮಮಂದಿರ-ಬಾಬರಿ ಮಸೀದಿ ವಿವಾದ ಪೂರ್ಣವಾಗಿ ‘ಆಸ್ತಿ ವಿವಾದ’ ಹಾಗೂ ರಾಜಕೀಯ ಅಥವಾ ಧಾರ್ಮಿಕ ಸೂಕ್ಷ್ಮ ವಿವಾದ ಎಂಬ ನೆಲೆಯಲ್ಲಿ ಇದನ್ನು ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಲು ಸಾಧ್ಯವಿಲ್ಲ ಎಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ತಿಳಿಸಿವೆ.

ಈ ಪ್ರಕರಣದಲ್ಲಿ ಮೊದಲ ನಾಗರಿಕ ದಾವೆ ಸಲ್ಲಿಸಿದವರಲ್ಲಿ ಒಬ್ಬರಾದ ಮೂಲ ಪಿರ್ಯಾದುದಾರ ಗೋಪಾಲ್ ಸಿಂಗ್ ವಿಶಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಹರೀಶ್ ಸಾಳ್ವೆ, ಈ ಪ್ರಕರಣವನ್ನು ಮೂವರು ಸದಸ್ಯರ ಪೀಠ ಈಗಾಗಲೇ ಕೈಗೆತ್ತಿಕೊಂಡಿರುವಾಗ ವಿಸ್ತೃತ ಪೀಠಕ್ಕೆ ಶಿಫಾರಸು ಮಾಡುವ ಅಗತ್ಯತೆ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಅಬ್ದುಲ್ ನಝೀರ್ ಅವರನ್ನು ಒಳಗೊಂಡ ಪೀಠಕ್ಕೆ ಹೇಳಿದರು.

ಸುಪ್ರೀಂ ಕೋರ್ಟ್‌ನಲ್ಲಿ ಈಗಿರುವ ಪದ್ಧತಿ ಹಾಗೂ ಸಂಪ್ರದಾಯದ ಪ್ರಕಾರ ಯಾವುದೇ ಉಚ್ಚ ನ್ಯಾಯಾಲಯದ ಪೂರ್ಣ ಪೀಠ ನೀಡಿದ ತೀರ್ಪಿನ ವಿರುದ್ಧದ ಮೇಲ್ಮನವಿಯ ತೀರ್ಮಾನ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠದ ಬದಲು ತ್ರಿಸದಸ್ಯ ಪೀಠದಲ್ಲಿ ನಡೆಯಬೇಕು ಎಂದು ಸಾಳ್ವೆ ತಿಳಿಸಿದ್ದಾರೆ. ರಾಮ್ ಲಲ್ಲಾ ವಿರಾಜಮಾನ್ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಕೆ. ಪರಾಶರನ್ ಕೂಡ ಸಾಳ್ವೆ ಅವರ ವಾದಕ್ಕೆ ಬೆಂಬಲ ನೀಡಿದರು ಹಾಗೂ ಈ ಪ್ರಕರಣ ವಿಚಾರಣೆ ತ್ರಿಸದಸ್ಯ ಪೀಠದ ಮುಂದೆ ಮಾತ್ರ ನಡೆಯಬೇಕು ಎಂದರು.

ಮುಸ್ಲಿಮ್ ಸಂಸ್ಥೆಗಳು ಹಾಗೂ ದೂರುದಾರ ಎಂ. ಸಿದ್ದೀಕ್ ಪರ ಹಾಜರಾಗಿದ್ದ ಹಿರಿಯ ನ್ಯಾಯವಾದಿ ರಾಜು ರಾಮಚಂದ್ರನ್, ಈ ವಿವಾದದ ಸೂಕ್ಷ್ಮತೆ ಹಾಗೂ ಪ್ರಾಮುಖ್ಯತೆ ಗಮನಿಸಿ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಬೇಕು ಎಂದರು.

ಪ್ರಕರಣದ ವಿಚಾರಣೆ ಅಸಂಪೂರ್ಣವಾಗಿದ್ದು, ಮೇ 15ರಂದು ಮುಂದುವರಿಯಲಿದೆ. ನಾಲ್ಕು ನಾಗರಿಕ ದಾವೆ ಕುರಿತು ಉಚ್ಚ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ಸಲ್ಲಿಸಲಾದ ಒಟ್ಟು 14 ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಶೇಷ ಪೀಠ ವಿಚಾರಣೆಗೆ ಕೈಗೆತ್ತಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News