2017-18 ರಲ್ಲಿ ಭಾರತದ ಬೀಫ್ ರಫ್ತಿನಲ್ಲಿ ಹೆಚ್ಚಳ
ಹೊಸದಿಲ್ಲಿ, ಎ.27: 2017-18ರಲ್ಲಿ ಭಾರತವು 13.48 ಲಕ್ಷ ಟನ್ ಕೋಣದ ಮಾಂಸ ರಫ್ತು ಮಾಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ.2ರಷ್ಟು ಹೆಚ್ಚಳವಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.
ವಿಯೆಟ್ನಾಂ, ಮಲೇಶ್ಯಾ ಮತ್ತು ಈಜಿಪ್ಟ್ ದೇಶಗಳು ಭಾರತದಿಂದ ಕೋಣದ ಮಾಂಸ ಆಮದು ಮಾಡಿಕೊಳ್ಳುತ್ತಿರುವ ಪ್ರಮುಖ ದೇಶಗಳಾಗಿವೆ. 2017-18ರಲ್ಲಿ ಭಾರತ ರಫ್ತು ಮಾಡಿದ ಕೋಣದ ಮಾಂಸದ ಮೌಲ್ಯ 25,988 ಕೋಟಿ ರೂ. ಆಗಿದ್ದರೆ, 2016-17ರಲ್ಲಿ 13,23,578 ಟನ್ ಕೋಣದ ಮಾಂಸ(ಒಟ್ಟು ಮೌಲ್ಯ 26,161 ಕೋಟಿ ರೂ.) ರಫ್ತು ಮಾಡಲಾಗಿದೆ ಎಂದು ಎಪಿಇಡಿಎಯ ವರದಿ ತಿಳಿಸಿದೆ. ಅಲ್ಲದೆ 2016-17ರಲ್ಲಿ 21,513 ಕೋಟಿ ರೂ. ವೌಲ್ಯದ ಬಾಸ್ಮತಿ ಅಕ್ಕಿ ರಫ್ತು ಮಾಡಲಾಗಿದ್ದರೆ ಈ ಪ್ರಮಾಣ 2017-18ರಲ್ಲಿ 40,51,896 ಟನ್‌ಗಳಿಗೆ ಏರಿದ್ದು ಒಟ್ಟು ಮೌಲ್ಯ 26,841 ಕೋಟಿ ರೂ. ಆಗಿದೆ ಎಂದು ವರದಿ ತಿಳಿಸಿದೆ. ಇತರ ಅಕ್ಕಿಯ ರಫ್ತು ಪ್ರಮಾಣದಲ್ಲೂ ಏರಿಕೆಯಾಗಿದ್ದು 67,70,833 ಟನ್ ಅಕ್ಕಿ ರಫ್ತು ಮಾಡಲಾಗಿದೆ.
2017-18ರಲ್ಲಿ 51,796 ಕೋಟಿ ರೂ. ಮೌಲ್ಯದ ಧಾನ್ಯಗಳನ್ನು ರಫ್ತು ಮಾಡಲಾಗಿದ್ದರೆ, ಜಾನುವಾರು ಉತ್ಪನ್ನಗಳ ಒಟ್ಟು ರಫ್ತು ಮೌಲ್ಯ 29,712 ಕೋಟಿ ರೂ. ಆಗಿದೆ ಎಂದು ತಿಳಿಸಲಾಗಿದೆ.