ಅಫ್ಘಾನಿಸ್ತಾನ ಎದುರಿನ ಟೆಸ್ಟ್‌ಗೆ ಕೊಹ್ಲಿ ಲಭ್ಯತೆ ಅಗತ್ಯ : ಬಿಸಿಸಿಐ

Update: 2018-04-27 18:27 GMT

ಹೊಸದಿಲ್ಲಿ, ಎ.27: ಅಫ್ಘಾನಿಸ್ತಾನದ ಎದುರು ಜೂನ್ 14ರಿಂದ ಆರಂಭವಾಗುವ ಏಕೈಕ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ವಿರಾಟ್ ಕೊಹ್ಲಿಯೇ ಮುನ್ನಡೆಸಬೇಕು ಎಂದು ಬಿಸಿಸಿಐ ಬಯಸಿರುವ ಕಾರಣ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ತನ್ನ ನಿರ್ಧಾರವನ್ನು ಕೊಹ್ಲಿ ಮರುಪರಿಶೀಲಿಸುವ ಅನಿವಾರ್ಯತೆ ಯಿದೆ ಎನ್ನಲಾಗಿದೆ.

ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಅಲ್ಲಿಯ ಪರಿಸ್ಥಿತಿಗೆ ಹೊಂದಿಕೊಳ್ಳುವ ಉದ್ದೇಶದಿಂದ ಭಾರತದ ಟೆಸ್ಟ್ ಸ್ಪೆಷಲಿಸ್ಟ್ (ಟೆಸ್ಟ್ ತಜ್ಞ) ಆಟಗಾರರು ಇಂಗ್ಲೆಂಡಿನಲ್ಲಿ ಕೌಂಟಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಬಗ್ಗೆ ಬಿಸಿಸಿಐಗೆ ಸುಪ್ರೀಂಕೋರ್ಟ್ ನೇಮಿಸಿರುವ ಆಡಳಿತಗಾರರ ಸಮಿತಿ(ಸಿಒಎ) ಒಲವು ಹೊಂದಿದೆ. ಆದರೆ ಸಿಒಎ ನಿಲುವಿಗೆ ಬಿಸಿಸಿಐ ವಿರೋಧ ವ್ಯಕ್ತಪಡಿಸಿದೆ. ಕೊಹ್ಲಿ ಅಪಘಾನಿಸ್ತಾನದ ಎದುರಿನ ಟೆಸ್ಟ್ ಪಂದ್ಯದಿಂದ ಹೊರಗುಳಿದರೆ ಇದು ಎದುರಾಳಿ ತಂಡಕ್ಕೆ ಅಗೌರವ ತೋರಿಸಿದಂತೆ ಆಗುವುದಲ್ಲದೆ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗುತ್ತದೆ ಎಂಬುದು ಬಿಸಿಸಿಐ ನಿಲುವಾಗಿದೆ. ಅಂತರಾಷ್ಟ್ರೀಯ ಪಂದ್ಯವನ್ನು ತಪ್ಪಿಸಿಕೊಂಡು ಕೌಂಟಿ ಕ್ರಿಕೆಟ್‌ನಲ್ಲಿ ಆಡಲು ಟೆಸ್ಟ್ ತಂಡದ ನಾಯಕನಿಗೆ ಅವಕಾಶ ಮಾಡಿಕೊಟ್ಟರೆ ಇದು ಕೆಟ್ಟ ಸಂಪ್ರದಾಯ ಹಾಕಿಕೊಟ್ಟಂತಾಗುತ್ತದೆ ಎಂದು ಬಿಸಿಸಿಐ ಅಧಿಕಾರಿಯೋರ್ವರು ತಿಳಿಸಿರುವುದಾಗಿ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ಅಲ್ಲದೆ ಹೀಗೆ ಮಾಡಿದರೆ ಪ್ರವಾಸೀ ಅಪಘಾನಿಸ್ತಾನ ತಂಡವನ್ನು ಅವಮಾನಿಸಿದಂತಾಗುತ್ತದೆ. ಜೊತೆಗೆ ನೇರ ಪ್ರಸಾರದ ಹಕ್ಕು ಪಡೆದವರಿಗೂ ಅನ್ಯಾಯ ಮಾಡಿದಂತಾಗುತ್ತದೆ. ಒಂದು ವೇಳೆ ಆ ಸಂದರ್ಭ ಕೊಹ್ಲಿ ಇಂಗ್ಲೆಂಡಿನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತಿದ್ದರೂ ಏಕೈಕ ಟೆಸ್ಟ್ ಪಂದ್ಯ ಆಡಲು ಭಾರತಕ್ಕೆ ವಾಪಸಾಗಿ, ಪಂದ್ಯ ಮುಗಿದ ಬಳಿಕ ಮರಳಬಹುದು. ಅಲ್ಲದೆ ಕೌಂಟಿ ಕ್ರಿಕೆಟ್ ಆಡಲು ಕೊಹ್ಲಿ ಅಷ್ಟೊಂದು ಆಸಕ್ತರಾಗಿದ್ದರೆ ಅವರು ಐಪಿಎಲ್ ಪಂದ್ಯಾವಳಿಯನ್ನು ತ್ಯಜಿಸಬಹುದಿತ್ತು ಎಂದು ಅಧಿಕಾರಿ ಹೇಳಿರುವುದಾಗಿ ವರದಿಯಾಗಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಭಾರತವು ಐದು ಟೆಸ್ಟ್ ಪಂದ್ಯ, ಮೂರು ಏಕದಿನ ಪಂದ್ಯ ಹಾಗೂ ಮೂರು ಟಿ-20 ಪಂದ್ಯವಾಡಲಿದೆ. ಅಪಘಾನಿಸ್ತಾನದ ಎದುರಿನ ಏಕೈಕ ಟೆಸ್ಟ್ ಪಂದ್ಯ ಬೆಂಗಳೂರಿನಲ್ಲಿ ಜೂನ್ 14ರಿಂದ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News