×
Ad

ಚೆನ್ನೈಗೆ ಸೇಡು ತೀರಿಸಲು ಮುಂಬೆ ತವಕ

Update: 2018-04-27 23:59 IST

ಪುಣೆ, ಎ.27: ಐಪಿಎಲ್ ಟ್ವೆಂಟಿ-20 ಟೂರ್ನಮೆಂಟ್‌ನಲ್ಲಿ ಸೋಲಿನ ಸರಮಾಲೆ ಎದುರಿಸುತ್ತಿರುವ ಮುಂಬೈ ಇಂಡಿಯನ್ಸ್ ತಂಡ ಶನಿವಾರ ನಡೆಯಲಿರುವ ಐಪಿಎಲ್‌ನ 27ನೇ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

 ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಚೆನ್ನೈಗೆ ಸೇಡು ತೀರಿಸಲು ಮುಂಬೈ ನೋಡುತ್ತಿದೆ. ಮುಂಬೈ ವಿರುದ್ಧ ಚೆನ್ನೈ ತಂಡ ಮೊದಲ ಪಂದ್ಯದಲ್ಲಿ ಗೆಲುವಿನೊಂದಿಗೆ ಈ ಆವೃತ್ತಿಯಲ್ಲಿ ಅಭಿಯಾನ ಆರಂಭಿಸಿತ್ತು. ಮುಂಬೈ 1 ವಿಕೆಟ್ ಅಂತರದಲ್ಲಿ ಸೋಲು ಅನುಭವಿಸಿತ್ತು. ಈ ಆಘಾತದಿಂದ ಮುಂಬೈ ಹೊರ ಬಂದಿಲ್ಲ. ಅದು ಆಡಿರುವ ಆರು ಪಂದ್ಯಗಳಲ್ಲಿ 5ರಲ್ಲಿ ಸೋಲು ಅನುಭವಿಸಿದ್ದು, ಪ್ಲೇ ಆಫ್‌ನಿಂದ ದೂರ ಉಳಿಯಬೇಕಾದ ಭೀತಿಯನ್ನು ಎದುರಿಸುತ್ತಿದೆ.

ಇದೇ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಡಿರುವ 6 ಪಂದ್ಯಗಳ ಪೈಕಿ 5ರಲ್ಲಿ ಜಯ ಗಳಿಸಿದೆ. ಕೇವಲ 1ರಲ್ಲಿ ಸೋಲು ಅನುಭವಿಸಿತ್ತು. ಚೆನ್ನೈಗೆ ತವರಿನಿಂದ ಐಪಿಎಲ್ ಪಂದ್ಯಗಳು ಪುಣೆಗೆ ಸ್ಥಳಾಂತರಗೊಂಡಿದ್ದರೂ, ಗೆಲುವಿಗೆ ಅಡ್ಡಿಯಾಗಿಲ್ಲ. ಆಡಿದ ಮೊದಲ ಪಂದ್ಯದಲ್ಲಿ ಜಯ ಗಳಿಸಿತ್ತು.

ಮುಂಬೈ ತಂಡವು ಚೆನ್ನೈ ವಿರುದ್ಧ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ತಂಡದ ಆರಂಭಿಕ ದಾಂಡಿಗ ಸೂರ್ಯಕುಮಾರ್ ಯಾದವ್ ಅವರನ್ನು ಹೊರತುಪಡಿಸಿ ತಂಡದ ಸಹ ಆಟಗಾರರು ಕಳಪೆ ಫಾರ್ಮ್ ಎದುರಿಸುತ್ತಿದ್ದಾರೆ. ನಾಯಕ ರೋಹಿತ್ ಶರ್ಮಾ ಆಡಿರುವ ಆರು ಪಂದ್ಯಗಳ ಪೈಕಿ 5ರಲ್ಲಿ ಮಿಂಚುವಲ್ಲಿ ಎಡವಿದ್ದಾರೆ.

 ರೋಹಿತ್ ಶರ್ಮಾ, ಪೊಲಾರ್ಡ್, ಸೂರ್ಯಕುಮಾರ್ ಯಾದವ್, ಎವಿನ್ ಲೆವಿಸ್ ಮತ್ತು ಹಾರ್ದಿಕ್ ಪಾಂಡ್ಯ ಫಾರ್ಮ್‌ಗೆ ಮರಳಿ ದೊಡ್ಡ ಮೊತ್ತದ ಕೊಡುಗೆ ನೀಡಿದರೆ ತಂಡದ ಗೆಲುವಿಗೆ ಸಮಸ್ಯೆ ಎದುರಾಗದು. ಕೋಚ್ ಮಹೇಲ ಜಯವರ್ಧನೆ ಬಲಿಷ್ಠ ತಂಡ ಕಟ್ಟುವಲ್ಲಿ ಎಡವಿದ್ದಾರೆ. ರೋಹಿತ್ ಶರ್ಮಾ ರಾಯಲ್ ಚಾಲೆಂಜರ್ಸ್‌ ವಿರುದ್ಧ 94 ರನ್ ಸಿಡಿಸಿದ್ದರು. ಆದರೆ ಉಳಿದ ಐದು ಪಂದ್ಯಗಳಲ್ಲಿ 20ರನ್ ಸೇರಿಸುವಲ್ಲೂ ವಿಫಲರಾಗಿದ್ದಾರೆ. ರೋಹಿತ್ ಶರ್ಮಾ ಅವರು ಇನಿಂಗ್ಸ್ ಆರಂಭಿಸುವಂತೆ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ನಂ.4 ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಸುವಂತೆ ಸಲಹೆ ಕೇಳಿ ಬಂದಿದೆ.

20ರ ಹರೆಯದ ಬೌಲರ್ ಮಾಯಾಂಕ್ 6 ಪಂದ್ಯಗಳಲ್ಲಿ 10ವಿಕೆಟ್ ಪಡೆದಿದ್ದಾರೆ. ದೆತ್ ಓವರ್ ಸ್ಪೆಶಲಿಸ್ಟ್ ಜಸ್‌ಪ್ರೀತ್ ಬುಮ್ರಾ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ನಾಳಿನ ಪಂದ್ಯಕ್ಕೆ ಮುಂಬೈ ತಂಡ ಮಿಚೆಲ್ ಮೆಕ್ಲೀನಘನ್ ಬದಲಿಗೆ ಆ್ಯಡಮ್ ಮಿಲ್ನೆ ಅವರನ್ನು ಅಂತಿಮ ಹನ್ನೊಂದರಲ್ಲಿ ಸೇರಿಸಿಕೊಳ್ಳಲು ನೋಡುತ್ತಿದೆ.

ಚೆನ್ನೈ ತಂಡ ಉತ್ತಮ ಫಾರ್ಮ್‌ನಲ್ಲಿದೆ. ಕಳೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ದೊಡ್ಡ ಮೊತ್ತದ ಸವಾಲನ್ನು ಬೆನ್ನಟ್ಟಿ ಗೆಲುವು ದಾಖಲಿಸಿತ್ತು. ನಾಯಕ ಮಹೇಂದ್ರ ಸಿಂಗ್ ಧೋನಿ ಗೆಲುವಿಗೆ ನೆರವಾಗಿದ್ದರು. ತಂಡದ ಆಟಗಾರರಾದ ಶೇನ್ ವ್ಯಾಟ್ಸನ್, ಅಂಬಟಿ ರಾಯುಡು, ಡ್ವೇಯ್ನಾ ಬ್ರಾವೊ, ಧೋನಿ ಉತ್ತಮ ಫಾರ್ಮ್ ನಲ್ಲಿದ್ದಾರೆ. ಬೌಲಿಂಗ್‌ನಲ್ಲಿ ಶಾರ್ದುಲ್ ಠಾಕೂರ್, ಇಮ್ರಾನ್ ತಾಹಿರ್ ಮತ್ತು ದೀಪಕ್ ಚಹಾರ್ ಮಿಂಚುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News