ಕುಡ್ಸೆಂಪ್ ಹಗರಣ ಆರೋಪ; ಆಪಾದನೆ ಮಾಡಿದವರ ವಿರುದ್ಧ ಕ್ರಿಮಿನಲ್ ಕೇಸ್: ಲೋಬೊ

Update: 2018-04-28 13:51 GMT

ಮಂಗಳೂರು, ಎ.28: ‘‘ಕುಡ್ಸೆಂಪ್ ಹಗರಣವೆಂದು ನನ್ನ ವಿರುದ್ಧ ವೃಥಾರೋಪ ಮಾಡಲಾಗುತ್ತಿದೆ. ಆ ಮೂಲಕ ನನ್ನನ್ನು ಮಾನಸಿಕವಾಗಿ ಕೊಲೆ ಮಾಡುವ ಪ್ರಯತ್ನ ಮಾಡಲಾಗುತ್ತಿದ್ದು, ಇಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುತ್ತೇನೆ’’ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದ್ದಾರೆ.

ಮಂಗಳೂರಿನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘‘ಕುಡ್ಸೆಂಪ್ ಯೋಜನೆಯ ನಿದೇಶಕನಾಗಿದ್ದ ನಾನು ಅಲ್ಲಿಂದ 2009ರಲ್ಲಿ ವರ್ಗಾವಣೆಗೊಂಡಿದ್ದೆ. ಆದರೆ ಕುಡ್ಸೆಂಪ್ ಯೋಜನೆಯಲ್ಲಿ ಈಗ ಮಾಡಲಾಗುತ್ತಿರುವ ಆರೋಪಗಳೆಲ್ಲ ಕೇಳಿಬಂದಿರುವುದು 2011, 12, 13ರಲ್ಲಿ. ಈ ಅವಧಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದುದು ಬಿಜೆಪಿ. ಇದರಲ್ಲಿ ನನ್ನ ಪಾತ್ರವಿಲ್ಲದಿದ್ದರೂ ವಿಪಕ್ಷದ ಕೆಲವರು ಮಾಡುತ್ತಿರುವ ಆರೋಪದಿಂದ ನೋವಾಗಿದೆ. ಈ ಮೂಲಕ ನನ್ನನ್ನು ಮಾನಸಿಕವಾಗಿ ಕೊಲೆ ಮಾಡುವ ಪ್ರಯತ್ನ ಮಾಡಿದ್ದಾರೆ. ಇದರ ವಿರುದ್ಧ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದ್ದೇನೆ. ಇದೀಗ ಈ ರೀತಿ ಆರೋಪ ಮಾಡಿದ ಎಲ್ಲರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುತ್ತೇನೆ ಎಂದರು.

35 ವರ್ಷಗಳಿಂದ ಸರಕಾರಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಈ ಅವಧಿಯಲ್ಲಿ ತನ್ನ ವಿರುದ್ಧ ಯಾವುದೇ ಆರೋಪಗಳು ಕೇಳಿಬಂದಿರಲಿಲ್ಲ. ಅದೇರೀತಿ ಕುಡ್ಸೆಂಪ್‌ನಲ್ಲಿ ತಾನು ಅಧಿಕಾರಿಯಾಗಿದ್ದಾಗ 400 ಅಧಿಕ ಎಂಜಿನಿಯರ್‌ಗಳು, 70 ಗುತ್ತಿಗೆದಾರರು ತನ್ನ ಅಧೀನದಲ್ಲಿ ಕಾರ್ಯನಿರ್ವಹಿಸಿದ್ದರು. ಈ ಪೈಕಿ ಯಾರಾದರೊಬ್ಬರು ತಾನು ಭ್ರಷ್ಟ ಎಂದು ಹೇಳಿದರೆ ಆ ಬಗ್ಗೆ ಯಾವುದೇ ರೀತಿಯ ತನಿಖೆಯನ್ನು ಎದುರಿಸಲು ಸಿದ್ಧ ಎಂದರು.

ತನ್ನ ವಿರುದ್ಧ ಆರೋಪದ ಬಗ್ಗೆ ಯಾವುದೇ ರೀತಿಯ ವಿಚಾರಣೆ ಬೇಕಾದರೂ ಆಗಲಿ. ವೃಥಾರೋಪ ಮಾಡುತ್ತಿರುವವರು ಅದಕ್ಕೆ ಸಾಕ್ಷಗಳಿದ್ದರೆ ಲೋಕಾಯುಕ್ತರಿಗೆ ನೀಡಲಿ. ಅದು ಬಿಟ್ಟು ಚುನಾವಣೆಯ ಕಾರಣಕ್ಕೋಸ್ಕರ ಹೇಡಿಗಳಂತೆ ಈ ರೀತಿ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಲೋಬೊ ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಮಹಾಬಲ ಮಾರ್ಲ, ಯುವ ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ ಮಿಥುನ್ ರೈ ಮತ್ತಿತ್ತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News