ಮೇ 10ರಿಂದ 12, 14ರಿಂದ 15: ಜಿಲ್ಲೆಯಲ್ಲಿ ಮದ್ಯಪಾನ ನಿಷೇಧ

Update: 2018-04-28 16:19 GMT

ಉಡುಪಿ, ಎ.28: ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿ ಮೇ 12ರಂದು ಮತದಾನ ನಡೆಸಲು ಹಾಗೂ ಮೇ 15ರಂದು ಮತಗಳ ಎಣಿಕೆ ನಡೆಸಲು ಚುನಾವಣಾ ವೇಳಾಪಟ್ಟಿ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಶಾಂತಿಪಾಲನೆ, ಕಾನೂನು ಸುವ್ಯವಸ್ಥೆ, ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ವಾತಾವರಣದಲ್ಲಿ ಚುನಾವಣೆ ನಡೆಯುವಂತಾಗಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಲ್ಲೆಯಲ್ಲಿ ಆ ದಿನಗಳನ್ನು ಮದ್ಯಪಾನ ನಿರೋಧ ದಿನಗಳೆಂದು ಘೋಷಿಸಿ ಆದೇಶ ಹೊರಡಿಸಿದ್ದಾರೆ.

ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನ ಪ್ರಾರಂಭಗೊಳ್ಳುವ ದಿನಕ್ಕೆ 24 ಗಂಟೆ ಮುಂಚಿತವಾಗಿ ಹಾಗೂ ಮತದಾನದ ದಿನ ಪೂರ್ತಿ ಮತ್ತು ಮತ ಎಣಿಕೆ ದಿನದಂದು ಮಧ್ಯರಾತ್ರಿಯವರೆಗೆ ಮದ್ಯ ಮಾರಾಟ ಮತ್ತು ಸಾಗಾಟವನ್ನು ನಿಷೇಧಿಸಿ ಪಾನ ನಿರೋಧ ದಿನವೆಂದು ಘೋಷಿಸಲಾಗಿದೆ.

 ಅದರಂತೆ ಮೇ 10ರಂದು ಮಧ್ಯರಾತ್ರಿ 12 ಗಂಟೆಯಿಂದ ಮೇ 12ರ ಮಧ್ಯರಾತ್ರಿ 12 ಗಂಟೆಯವರೆಗೆ ಹಾಗೂ ಮೇ 14ರ ಮಧ್ಯರಾತ್ರಿ 12ರಿಂದ 15ರ ಮದ್ಯರಾತ್ರಿ 12ಗಂಟೆಯವರೆಗಿನ ಅವಧಿಯಲ್ಲಿ ಜಿಲ್ಲಾದ್ಯಂತ ಎಲ್ಲಾ ರೀತಿಯ ಮದ್ಯದಂಗಡಿಗಳನ್ನು, ಮದ್ಯ ಮಾರಾಟ ಡಿಪೋಗಳನ್ನು, ಮದ್ಯ ತಯಾರಿ ಡಿಸ್ಟಿಲರಿಗಳನ್ನು, ಸ್ಟಾರ್ ಹೊಟೇಲ್‌ಗಳನ್ನು, ಸೇಂದಿ ಅಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ.

ಅಲ್ಲದೇ ಯಾವುದೇ ಹೊಟೇಲುಗಳಲ್ಲಿ, ಕ್ಲಬ್‌ಗಳಲ್ಲಿ ಮದ್ಯಮಾರಾಟ ಹಾಗೂ ಸರಬರಾಜು ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಆದೇಶ ಜಿಲ್ಲೆಯಾದ್ಯಂತ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News