ಪುತ್ತೂರು: ಕೆಎಸ್ಸಾರ್ಟಿಸಿ ವಿಭಾಗೀಯ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ

Update: 2018-04-28 18:04 GMT

ಪುತ್ತೂರು, ಎ.28 ಶಿಕ್ಷಣಕ್ಕೆ ಮೊದಲ ಆದ್ಯತೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ನೀಡಿದ್ದು, ಅಂಬೇಡ್ಕರ್ ಅವರ ಅನುಕರಣೆ, ಮೂರ್ತಿ ಪೂಜೆ ಮಾಡುವುದರ ಬದಲು, ಅವರ ಬದುಕಿನ ಆದರ್ಶದ ಜೀವನವನ್ನು ಅನುಸರಿಸಬೇಕು ಅಂಬೇಡ್ಕರ್ ಜಾತ್ಯತೀತ ಭಾವನೆಯಿಂದ ಸಮಾಜವನ್ನು ಕಟ್ಟುವ ಕಡೆ ಗಮನಹರಿಸಿದ್ದರು. ಆದರೆ ನಾವು ಇದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂದು ಉಪ್ಪಿನಂಗಡಿ ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಸುಬ್ಬಪ್ಪಕೈಕಂಬ ಹೇಳಿದರು.

ಅವರು ಮುಕ್ರಂಪಾಡಿಯಲ್ಲಿರುವ ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗದ ವಿಭಾಗೀಯ ಕಾರ್ಯಾಗಾರದ ಸಭಾಂಗಣದಲ್ಲಿ ಶನಿವಾರ ಡಾ.ಅಂಬೇಡ್ಕರ್ ಅವರ 127ನೇ ಜನ್ಮ ದಿನಾಚರಣೆ ಹಾಗೂ ವಿಷು ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುವಂತೆ ಸೂಚಿಸಿದ್ದರು. ಆದರೆ ನಾವು ಕೊನೆ ಸ್ಥಾನವನ್ನು ನೀಡುತ್ತಿದ್ದೇವೆ. ಮೊದಲು ಹೋರಾಟ, ಬಳಿಕ ಸಂಘಟನೆ, ಇಲ್ಲಿ ಸೋಲಾದಾಗ ಶಿಕ್ಷಣ ನೆನಪಾಗುತ್ತದೆ. ಇದರ ಬದಲು ಶಿಕ್ಷಣ ಪಡೆದು ಸಂಘಟನೆಯಲ್ಲಿ ತೊಡಗಿಕೊಳ್ಳಿ. ಅಂತಹ ಸಂಘಟನೆ ನಡೆಸುವ ಹೋರಾಟಕ್ಕೆ ಸರಿಯಾದ ಗುರಿ ಇರುತ್ತದೆ. ಇದರಿಂದ ಕೈಹಿಡಿದ ಕೆಲಸ ಯಶಸ್ಸಾಗುತ್ತದೆ ಎಂದು ಹೇಳಿದರು.

ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ್ ಎಸ್. ಶಿರಾಲಿ ಅಧ್ಯಕ್ಷತೆ ವಹಿಸಿದ್ದರು.

ವಿಭಾಗೀಯ ಸಂಚಾಲನಾ ಅಧಿಕಾರಿ ಮುರಳೀಧರ ಆಚಾರ್ಯ, ವಿಭಾಗೀಯ ಯಾಂತ್ರಿಕ ಅಭಿಯಂತರ ವೇಣುಗೋಪಾಲ್, ಎಸ್ಸಿ ಮತ್ತು ಎಸ್ಟಿ ನೌಕರರ ಸಂಘದ ಗೌರವಾಧ್ಯಕ್ಷ ಪಿ.ಕೇಶವ, ಎಸ್ಸಿ ಮತ್ತು ಎಸ್ಟಿ ನೌಕರರ ಸಂಘದ ಅಧ್ಯಕ್ಷ ಬಾಬು ಉಪಸ್ಥಿತರಿದ್ದರು.

ಇದೇ ಸಂದರ್ಭ ನಗರಸಭೆಯ ಶುಚಿತ್ವ ವಿಭಾಗದ ಗೋಪಾಲ್, ವಿಮಲಾ ಹಾಗೂ ವಿಭಾಗೀಯ ಕಚೇರಿಯ ನಾಗಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಉಪಮುಖ್ಯ ಕಾರ್ಮಿಕ ಕಲ್ಯಾಣ ಅಧಿಕಾರಿ ಎಚ್.ದಿವಾಕರ ಸ್ವಾಗತಿಸಿದರು. ಅಂಕಿ-ಅಂಶ ವಿಭಾಗದ ಮೇಲ್ವಿಚಾರಕ ಸಂಜೀವ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಸಹಾಯಕ ತುಕಾರಾಂ ವಂದಿಸಿದರು. ರಮೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News