ದಲಿತರ ಹಕ್ಕುಗಳ ರಕ್ಷಣೆಗಾಗಿ ಸರಕಾರವು ಸುಗ್ರೀವಾಜ್ಞೆ ಹೊರಡಿಸಬಹುದು: ಪಾಸ್ವಾನ್

Update: 2018-04-29 15:57 GMT

ಹೊಸದಿಲ್ಲಿ,ಎ.29: ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆಯನ್ನು ದುರ್ಬಲಗೊಳಿಸಿರುವ ತನ್ನ ಮಾ.20ರ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ಹಿಂದೆಗೆದುಕೊಳ್ಳದಿದ್ದರೆ ಎಸ್‌ಸಿ/ಎಸ್‌ಟಿಗಳ ಹಕ್ಕುಗಳನ್ನು ಎತ್ತಿ ಹಿಡಿಯಲು ಸರಕಾರವು ಸುಗ್ರೀವಾಜ್ಞೆಯನ್ನು ಹೊರಡಿಸಲಿದೆ ಮತ್ತು ಇದಕ್ಕಾಗಿ ಅಗತ್ಯವಾದರೆ ಸಂವಿಧಾನಕ್ಕೆ ತಿದ್ದುಪಡಿಯನ್ನೂ ತರಲಿದೆ ಎಂದು ಕೇಂದ್ರ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ರವಿವಾರ ಇಲ್ಲಿ ಹೇಳಿದರು.

ದಲಿತರ ವಿಷಯದಲ್ಲಿ ಸರಕಾರವು ದೃಷ್ಟಿಕೋನದ ಸಮಸ್ಯೆಗೆ ಸಿಲುಕಿದೆ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಒಪ್ಪಿಕೊಂಡ ಅವರು,ಆದರೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡರೆ ಇದನ್ನು ಕ್ಷಣಮಾತ್ರದಲ್ಲಿ ಬಗೆಹರಿಸಬಹುದು ಎಂದರು.

ಸರಕಾರವು ದಲಿತ ವಿರೋಧಿಯಾಗಿದೆ ಎಂಬ ದೃಷ್ಟಿಕೋನವನ್ನು ಕೇವಲ ಎರಡು ದಿನಗಳಲ್ಲಿ ಬದಲಿಸಬಹುದು. ಸರಕಾರವು ಸಲ್ಲಿಸಿರುವ ಪುನರ್‌ಪರಿಶೀಲನೆ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಮೇ 3ರಂದು ನಡೆಸಲಿದೆ. ನ್ಯಾಯಾಲಯದ ತೀರ್ಪು ಕಾಯ್ದೆಯಲ್ಲಿನ ಮೂಲ ನಿಯಮಗಳನ್ನು ಹಾಗೆಯೇ ಉಳಿಸಿಕೊಳ್ಳಬೇಕೆಂಬ ಬೇಡಿಕೆಗೆ ಪೂರಕವಾಗಿಲ್ಲ ಎಂದಾದರೆ ಸರಕಾರವು ಸುಗ್ರೀವಾಜ್ಞೆಯನ್ನು ಹೊರಡಿಸಿ ಎಸ್‌ಸಿ/ಎಸ್‌ಟಿ ಕಾಯ್ದೆಯನ್ನು ಮೊದಲಿನ ರೂಪದಲ್ಲಿಯೇ ಉಳಿಸಿಕೊಳ್ಳಲಿದೆ ಎಂದು ಅವರು ತಿಳಿಸಿದರು.

 ನ್ಯಾಯಾಲಯವು ತನ್ನ ಹಿಂದಿನ ಆದೇಶವನ್ನು ಬದಲಿಸದಿದ್ದರೆ ಅದರ ತೀರ್ಪನ್ನು ನಿಷ್ಫಲಗೊಳಿಸಲು ಸರಕಾರ ಮುಂದಾಗುವುದೇ ಎಂಬ ಪ್ರಶ್ನೆಗೆ ಪಾಸ್ವಾನ್, ಖಂಡಿತ.ಯಾವುದೇ ಬೆಲೆ ತೆತ್ತಾದರೂ ಸರಿಯೇ,ಎಸ್‌ಸಿ/ಎಸ್‌ಟಿ ಕಾಯ್ದೆಯನ್ನು ದುರ್ಬಲಗೊಳಿಸಲು ನಾವು ಅವಕಾಶ ನೀಡುವುದಿಲ್ಲ. ಎಸ್‌ಸಿ/ಎಸ್‌ಟಿಗಳ ಹಕ್ಕುಗಳ ರಕ್ಷಣೆಗಾಗಿ ಅಗತ್ಯವಿರುವ ಎಲ್ಲವನ್ನೂ ನಾವು ಮಾಡುತ್ತೇವೆ. ಅಗತ್ಯವಾದರೆ ಸಂವಿಧಾನಕ್ಕೆ ತಿದ್ದುಪಡಿಯನ್ನೂ ತರುತ್ತೇವೆ ಎಂದು ಉತ್ತರಿಸಿದರು.

ಸರಕಾರ ಮತ್ತು ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳಲ್ಲಿ ಭಡ್ತಿಗಳಲ್ಲಿ ಮೀಸಲಾತಿ ಕುರಿತೂ ಸರಕಾರವೂ ಇಂತಹುದೇ ಧೋರಣೆಯನ್ನು ಅನುಸರಿಸಲಿದೆ. ಸರ್ವೋಚ್ಚ ನ್ಯಾಯಾಲಯವು ಒಪ್ಪದಿದ್ದರೆ ಅಗತ್ಯವಾದರೆ ಸಂವಿಧಾನವನ್ನು ತಿದ್ದುಪಡಿ ಗೊಳಿಸುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News