ಮೇಯಲ್ಲಿ ಪರಮಾಣು ಪರೀಕ್ಷಾ ಸ್ಥಾವರ ಮುಚ್ಚುಗಡೆ: ಉತ್ತರ ಕೊರಿಯ

Update: 2018-04-29 16:12 GMT

ಸಿಯೋಲ್, ಎ. 29: ತನ್ನ ಪರಮಾಣು ಪರೀಕ್ಷಾ ಸ್ಥಾವರವನ್ನು ಮುಂದಿನ ತಿಂಗಳು ಮುಚ್ಚುವುದಾಗಿ ಹಾಗೂ ಅದನ್ನು ವೀಕ್ಷಿಸಲು ಅಮೆರಿಕದ ಶಸ್ತ್ರಾಸ್ತ್ರ ಪರಿಣತರನ್ನು ಆಹ್ವಾನಿಸುವುದಾಗಿ ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಭರವಸೆ ನೀಡಿದ್ದಾರೆ ಎಂದು ದಕ್ಷಿಣ ಕೊರಿಯ ರವಿವಾರ ಹೇಳಿದೆ.

 ಕಿಮ್ ಮತ್ತು ದಕ್ಷಿಣ ಕೊರಿಯ ಅಧ್ಯಕ್ಷ ಮೂನ್ ಜೇ-ಇನ್ ನಡುವೆ ಶುಕ್ರವಾರ ಉಭಯ ಕೊರಿಯಗಳ ಗಡಿಯಲ್ಲಿ ನಡೆದ ಶೃಂಗ ಸಮ್ಮೇಳನದ ವೇಳೆ ಕಿಮ್ ಈ ಭರವಸೆ ನೀಡಿದ್ದಾರೆ ಎಂದು ದಕ್ಷಿಣ ಕೊರಿಯದ ಅಧ್ಯಕ್ಷರ ವಕ್ತಾರ ಯೂನ್ ಯೂಂಗ್ ಚಾನ್ ಹೇಳಿದ್ದಾರೆ.

‘‘ಪರಮಾಣು ಪರೀಕ್ಷಾ ಸ್ಥಾವರವನ್ನು ಮೇ ತಿಂಗಳಲ್ಲಿ ಮುಚ್ಚುವುದಾಗಿ ಹಾಗೂ ಈ ಪ್ರಕ್ರಿಯೆಯನ್ನು ಅಂತಾರಾಷ್ಟ್ರೀಯ ಸಮುದಾಯದ ಗಮನಕ್ಕೆ ತರುವುದಕ್ಕಾಗಿ ದಕ್ಷಿಣ ಕೊರಿಯ ಮತ್ತು ಅಮೆರಿಕಗಳ ಪರಿಣತರು ಹಾಗೂ ಪತ್ರಕರ್ತರನ್ನು ಶೀಘ್ರವೇ ಆಹ್ವಾನಿಸುವುದಾಗಿ ಶೃಂಗ ಸಮ್ಮೇಳನದ ವೇಳೆ ಕಿಮ್ ಭರವಸೆ ನೀಡಿದ್ದಾರೆ’’ ಎಂದು ವಕ್ತಾರ ಹೇಳಿದ್ದಾರೆ.

‘‘ ‘ನಮ್ಮ ಬಗ್ಗೆ ಅಮೆರಿಕ ಹೇಸಿಗೆ ಪಡುತ್ತದೆ, ಆದರೆ, ಒಮ್ಮೆ ನಾವು ಮಾತನಾಡಿದರೆ, ದಕ್ಷಿಣ ಕೊರಿಯಕ್ಕೆ ಅಥವಾ ಅಮೆರಿಕಕ್ಕೆ ಪರಮಾಣು ಬಾಂಬನ್ನು ಉಡಾಯಿಸುವಂಥ ವ್ಯಕ್ತಿ ನಾನಲ್ಲ ಎನ್ನುವುದು ಅವರಿಗೆ ಮನವರಿಕೆಯಾಗುತ್ತದೆ’ ಎಂದು ಕಿಮ್ ಹೇಳಿದ್ದಾರೆ’’ ಎಂದು ವಕ್ತಾರ ಯೂನ್ ನುಡಿದರು.

‘‘ ‘ನಾವು ಅಮೆರಿಕದೊಂದಿಗೆ ಮಾತನಾಡುತ್ತಾ ಇದ್ದರೆ, ವಿಶ್ವಾಸ ನಿರ್ಮಾಣಗೊಂಡರೆ, ಯುದ್ಧ ಕೊನೆಗೊಂಡರೆ ಹಾಗೂ ನಮ್ಮ ಮೇಲೆ ದಾಳಿ ನಡೆಯುವುದಿಲ್ಲ ಎಂಬ ಭರವಸೆ ಲಭಿಸಿದರೆ, ನಾವು ಯಾಕೆ ಪರಮಾಣು ಅಸ್ತ್ರಗಳೊಂದಿಗೆ ಬದುಕುತ್ತೇವೆ?’ ಎಂದು ಕಿಮ್ ಪ್ರಶ್ನಿಸಿದರು’’ ಎಂದರು.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ನಡುವೆ ಮುಂದಿನ 3-4 ವಾರಗಳಲ್ಲಿ ಶೃಂಗ ಸಮ್ಮೇಳನ ನಡೆಯಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಈ ಹೇಳಿಕೆಗಳು ಪೂರಕ ವಾತಾವರಣ ನಿರ್ಮಿಸಲಿವೆ ಎಂದು ಭಾವಿಸಲಾಗಿದೆ.

ದ. ಕೊರಿಯದ ಸಮಯ ವಲಯಕ್ಕೆ ಮರಳಲು ಉ. ಕೊರಿಯ ಇಂಗಿತ

ಕೊರಿಯ ಶೃಂಗ ಸಮ್ಮೇಳನದ ಹಿನ್ನೆಲೆಯಲ್ಲಿ, ತನ್ನ ದೇಶದ ಸಮಯವನ್ನು 30 ನಿಮಿಷ ಮುಂದಕ್ಕೆ ಒಯ್ದು ದಕ್ಷಿಣ ಕೊರಿಯ ಸಮಯದ ಜೊತೆಗೆ ಸಮ್ಮಿಳಿತಗೊಳಿಸಲಾಗುವುದು ಎಂದು ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್ ಹೇಳಿದ್ದಾರೆ ಎಂದು ದಕ್ಷಿಣ ಕೊರಿಯ ಅಧ್ಯಕ್ಷ ಮೂನ್ ಜೇ-ಇನ್ ಅವರ ವಕ್ತಾರ ಯೂನ್ ಹೇಳಿದ್ದಾರೆ.

ಕೊರಿಯ ಪರ್ಯಾಯ ದ್ವೀಪದ ಎರಡು ದೇಶಗಳು 2015ರಿಂದ ಭಿನ್ನ ಸಮಯ ವಲಯಗಳನ್ನು ಹೊಂದಿವೆ. 2015ರಲ್ಲಿ ಉತ್ತರ ಕೊರಿಯವು ತನ್ನ ಸಮಯ ವಲಯವನ್ನು ದಿಢೀರ್ ಆಗಿ ದಕ್ಷಿಣ ಕೊರಿಯಕ್ಕಿಂತ 30 ನಿಮಿಷ ಹಿಂದಕ್ಕೆ ಒಯ್ದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News