ಮೆಕ್ಸಿಕೊ ಗೋಡೆಗೆ ಕಾಂಗ್ರೆಸ್ ಹಣ ಕೊಡದಿದ್ದರೆ ಸೆಪ್ಟಂಬರ್‌ನಲ್ಲಿ ಸರಕಾರ ಬಂದ್

Update: 2018-04-29 16:18 GMT

ವಾಶಿಂಗ್ಟನ್, ಎ. 29: ಮೆಕ್ಸಿಕೊ ಜೊತೆಗಿನ ಗಡಿಯುದ್ದಕ್ಕೂ ಗೋಡೆ ಕಟ್ಟುವ ತನ್ನ ಯೋಜನೆಗೆ ಹೆಚ್ಚಿನ ಹಣವನ್ನು ಒದಗಿಸಲು ಕಾಂಗ್ರೆಸ್ ವಿಫಲವಾದರೆ ಸೆಪ್ಟಂಬರ್‌ನಲ್ಲಿ ಮತ್ತೊಮ್ಮೆ ಕೇಂದ್ರ ಸರಕಾರವನ್ನು ಬಂದ್ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಬೆದರಿಸಿದ್ದಾರೆ.

‘‘ಅಮೆರಿಕ-ಮೆಕ್ಸಿಕೊ ಗೋಡೆ ಆರಂಭವಾಗಿದೆ. ನಮ್ಮಲ್ಲಿ 1.6 ಬಿಲಿಯ ಡಾಲರ್ (ಸುಮಾರು 10,660 ಕೋಟಿ ರೂಪಾಯಿ) ಇದೆ’’ ಎಂದು ಮಿಶಿಗನ್ ರಾಜ್ಯದ ವಾಶಿಂಗ್ಟನ್ ಟೌನ್‌ಶಿಪ್‌ನಲ್ಲಿ ಬೆಂಬಲಿಗರ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಹೇಳಿದರು.

‘‘ನಾವು ಸೆಪ್ಟಂಬರ್ 28ರಂದು ಮತ್ತೆ ಬರುತ್ತೇವೆ. ಗಡಿ ಭದ್ರತೆಗೆ ನಮಗೆ ಸಾಕಷ್ಟು ಹಣ ಸಿಗದಿದ್ದರೆ, ನಮಗೆ ಬೇರೆ ಆಯ್ಕೆ ಇರುವುದಿಲ್ಲ. ನಾವು ದೇಶವನ್ನು ಬಂದ್ ಮಾಡುತ್ತೇವೆ. ಯಾಕೆಂದರೆ ನಮಗೆ ಗಡಿ ಸುರಕ್ಷತೆ ಬೇಕು’’ ಎಂದು ಅವರು ಹೇಳಿದರು.

ವಲಸೆ ವಿಷಯದಲ್ಲಿ ಫೆಡರಲ್ ಸರಕಾರವು ಜನವರಿಯಲ್ಲಿ ಕೊಂಚ ಅವಧಿಗೆ ಸ್ಥಗಿತಗೊಂಡಿತ್ತು.

ಟ್ರಂಪ್ ಕಳೆದ ತಿಂಗಳು 1.3 ಟ್ರಿಲಿಯನ್ ಡಾಲರ್ ವೆಚ್ಚ ಮಸೂದೆಗೆ ಸಹಿ ಹಾಕಿದ್ದಾರೆ. ಇದು ಸೆಪ್ಟಂಬರ್ ಕೊನೆಯವರೆಗೆ ಸರಕಾರದ ವೆಚ್ಚಗಳಿಗೆ ನಿಧಿ ಒದಗಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News