ರೊಹಿಂಗ್ಯಾ ನಿರಾಶ್ರಿತ ಶಿಬಿರಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತಂಡ ಭೇಟಿ

Update: 2018-04-29 16:21 GMT

ಕಾಕ್ಸ್‌ಬಝಾರ್ (ಬಾಂಗ್ಲಾದೇಶ), ಎ. 29: ಬಾಂಗ್ಲಾದೇಶದ ಕಾಕ್ಸ್‌ಬಝಾರ್‌ನಲ್ಲಿರುವ ನಿರಾಶ್ರಿತ ಶಿಬಿರಗಳಲ್ಲಿ ವಾಸವಾಗಿರುವ ರೊಹಿಂಗ್ಯಾ ಮುಸ್ಲಿಮರ ಸ್ಥಿತಿಗತಿ ವೀಕ್ಷಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತಂಡವೊಂದು ರವಿವಾರ ಭೇಟಿ ನೀಡಿದೆ.

ಈ ಸಂದರ್ಭದಲ್ಲಿ ತಂಡವನ್ನು ಸ್ವಾಗತಿಸಲು ಸಾವಿರಾರು ನಿರಾಶ್ರಿತರು ಸೇರಿದ್ದರು.

ಕುಟುಪಲಾಂಗ್ ಶಿಬಿರದಲ್ಲಿ ಸೇರಿದ ನಿರಾಶ್ರಿತರು ಈ ಸಂದರ್ಭದಲ್ಲಿ ‘ನಮಗೆ ನ್ಯಾಯ ಬೇಕು’ ಸೇರಿದಂತೆ ಹಲವಾರು ಫಲಕಗಳನ್ನು ಪ್ರದರ್ಶಿಸಿದರು.

ಸೇನಾ ದಮನ ಕಾರ್ಯಾಚರಣೆಗೆ ಬೆದರಿ ಮ್ಯಾನ್ಮಾರ್‌ನಿಂದ ಸುಮಾರು 7 ಲಕ್ಷ ರೊಹಿಂಗ್ಯಾ ನಿರಾಶ್ರಿತರು ಬಾಂಗ್ಲಾದೇಶಕ್ಕೆ ಪಲಾಯನ ಮಾಡಿರುವುದನ್ನು ಸ್ಮರಿಸಬಹುದಾಗಿದೆ. ಮ್ಯಾನ್ಮಾರ್‌ಗೆ ಹಿಂದಿರುಗಲು ಅವರು ವಿಶ್ವಸಂಸ್ಥೆಯ ಭದ್ರತೆಯನ್ನು ಕೋರಿದ್ದಾರೆ.

ಮೂರು ದಿನಗಳ ಬಾಂಗ್ಲಾದೇಶ ಪ್ರವಾಸದಲ್ಲಿರುವ ವಿಶ್ವಸಂಸ್ಥೆಯ ತಂಡವು, ಅತ್ಯಾಚಾರ ಮತ್ತು ಹಿಂಸಾಚಾರ ಸಂತ್ರಸ್ತರು ಸೇರಿದಂತೆ ಹಲವು ರೊಹಿಂಗ್ಯಾ ಮುಸ್ಲಿಮರನ್ನು ಭೇಟಿಯಾಗಲಿದೆ.

ತಂಡದ ಬಾಂಗ್ಲಾದೇಶ ಪ್ರವಾಸವು ಸೋಮವಾರ ಮುಕ್ತಾಯಗೊಳ್ಳಲಿದ್ದು, ಬಳಿಕ ಅದು ಮ್ಯಾನ್ಮಾರ್‌ಗೆ ತೆರಳಲಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಐದು ಖಾಯಂ ದೇಶಗಳಾದ ಚೀನಾ, ಫ್ರಾನ್ಸ್, ರಶ್ಯ, ಅಮೆರಿಕ ಮತ್ತು ಬ್ರಿಟನ್ ಹಾಗೂ 10 ತಾತ್ಕಾಲಿಕ ಸದಸ್ಯ ದೇಶಗಳ ಪ್ರತಿನಿಧಿಗಳು ನಿಯೋಗದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News