ರಾಜ್ಯದಲ್ಲಿ ನಾಲ್ಕನೇ ಸ್ಥಾನ ಪಡೆದ ನಿಸರ್ಗನಿಗೆ ಖಗೋಳಶಾಸ್ತ್ರಜ್ಞನಾಗುವ ಗುರಿ

Update: 2018-04-30 12:10 GMT

ಉಡುಪಿ, ಎ. 30: ಇಂದು ಪ್ರಕಟಗೊಂಡ 2018ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು 593 ಅಂಕಗಳನ್ನು ಗಳಿಸುವ ಮೂಲಕ ರಾಜ್ಯದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ನಿಸರ್ಗನಿಗೆ ಮುಂದೆ ಖಗೋಳಶಾಸ್ತ್ರಜ್ಞನಾಗುವ ಗುರಿ ಇದೆ. ಸದ್ಯಕ್ಕೆ ರಾಜ್ಯದ ಉತ್ತಮ ಕಾಲೇಜಿನಲ್ಲಿ ಕಂಪ್ಯೂಟರ್ ಸಾಯನ್ಸ್‌ನಲ್ಲಿ ಇಂಜಿನಿಯರಿಂಗ್ ಓದುವ ಇಚ್ಛೆಯನ್ನು ಅವರು ಹೊಂದಿದ್ದಾರೆ.

ಬಾರಕೂರಿನಲ್ಲಿ ಟ್ಯಾಕ್ಸಿ ಚಾಲಕರಾಗಿರುವ ಕೇಶವರಾಜ್ ಹಾಗೂ ಗೃಹಿಣಿ ನಿರ್ಮಲ ಅವರ ಏಕೈಕ ಪುತ್ರನಾಗಿರುವ ನಿಸರ್ಗ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಹಾಗೂ ಗಣಕ ವಿಜ್ಞಾನದಲ್ಲಿ ತಲಾ 100 ಅಂಕಗಳನ್ನು ಗಳಿಸಿದ್ದಾರೆ. ಬ್ರಹ್ಮಾವರದ ಎಸ್‌ಎಂಎಸ್ ಆಂಗ್ಲ ಮಾಧ್ಯಮ (ಸಿಬಿಎಸ್‌ಇ) ಶಾಲೆಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಪೂರೈಸಿದ್ದಾರೆ. ಪ್ರತಿತರಗತಿಯಲ್ಲೂ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದ ನಿಸರ್ಗ ಅದನ್ನು ಪಿಯುಸಿಯಲ್ಲೂ ಮುಂದುವರಿಸಿದ್ದರು.

ತರಗತಿಯಲ್ಲಿ ಅದ್ಯಾಪಕರು ಮಾಡುವ ಪಾಠವನ್ನು ಏಕಾಗ್ರತೆಯಿಂದ ಕೇಳಿ ಮನನ ಮಾಡಿಕೊಳ್ಳುತಿದ್ದ ನಿಸರ್ಗ, ಶಾಲೆಯಲ್ಲೇ ಇದ್ದ ಜೆಇಇ-ಸಿಇಟಿ ತರಬೇತಿಗೆ ಸೇರಿದ್ದು ಬಿಟ್ಟರೆ, ಹೊರಗೆಲ್ಲೂ ಕೋಚಿಂಗ್ ಪಡೆದಿಲ್ಲ. ಪ್ರತಿದಿನದ ಪಾಠವನ್ನು ಅಂದೇ ಓದಿ ಮನದಟ್ಟು ಮಾಡಿಕೊಳ್ಳುತಿದ್ದ ಈತ ಕಳೆದೊಂದು ವರ್ಷದಿಂದ ವಾಟ್ಸ್‌ಅಪ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣ ಗಳಿಂದ ಸಂಪೂರ್ಣವಾಗಿ ದೂರಾಗಿದ್ದ. ತನ್ನ ಅಭ್ಯಾಸಕ್ಕೆ ಅಗತ್ಯವಿದ್ದ ವಿಷಯಗಳಿಗೆ ಮಾತ್ರ ಸ್ಮಾರ್ಟ್‌ಫೋನ್‌ಗಳನ್ನು ಬಳಸುತಿದ್ದುದಾಗಿ ತಿಳಿಸಿದ್ದಾರೆ.

 ಜೆಇಇಯಲ್ಲಿ ನಿರೀಕ್ಷಿತ ಮಟ್ಟದ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಸಿಇಟಿಯ ಫಲಿತಾಂಶಕ್ಕಾಗಿ ಕಾಯುತಿದ್ದು, ಅದರಲ್ಲಿ ಪಡೆಯುವ ರ್ಯಾಂಕಿಂಗ್ ಆಧಾರದಲ್ಲಿ ಸೀಟು ಸಿಗುವ ರಾಜ್ಯದ ಉತ್ತಮ ಕಾಲೇಜಿನಲ್ಲಿ ಕಂಪ್ಯೂಟರ್ ಸಾಯನ್ಸ್ ಕಲಿಯಲು ಬಯಸುವುದಾಗಿ ನಿಸರ್ಗ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News