ಆರೋಪಿಗಳ ಪರ ನಡೆದ ರ್ಯಾಲಿಯಲ್ಲಿ ಭಾಗವಹಿಸಿದ್ದ ಬಿಜೆಪಿ ಶಾಸಕನಿಗೆ ಸಚಿವನಾಗಿ ಭಡ್ತಿ
ಹೊಸದಿಲ್ಲಿ, ಎ.30: ಕಥುವಾ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪರ ನಡೆದ ರ್ಯಾಲಿಯಲ್ಲಿ ಭಾಗವಹಿಸಿದ್ದ ಬಿಜೆಪಿ ಶಾಸಕನಿಗೆ ಜಮ್ಮು ಕಾಶ್ಮೀರದ ಸಚಿವನಾಗಿ ಭಡ್ತಿ ನೀಡಿರುವುದು ಇದೀಗ ಭಾರೀ ವಿವಾದ ಸೃಷ್ಟಿಸಿದೆ.
ಬಿಜೆಪಿ ನಾಯಕ ರಾಜೀವ್ ಜಸ್ರೋಟಿಯಾ ಜಮ್ಮು ಹಾಗು ಕಾಶ್ಮೀರದ ನೂತನ ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಕಥುವಾ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪರ ನಡೆದ ರ್ಯಾಲಿಯಲ್ಲಿ ರಾಜೀವ್ ಜಸ್ರೋಟಿಯಾ ಕೂಡ ಭಾಗವಹಿಸಿದ್ದರು. ಇದೇ ರ್ಯಾಲಿಯಲ್ಲಿ ಭಾಗವಹಿಸಿದ್ದ ಬಿಜೆಪಿಯ ಲಾಲ್ ಸಿಂಗ್ ಹಾಗು ಸಿಪಿ ಗಂಗಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ,”ಕಥುವಾ ಪ್ರಕರಣದ ಆರೋಪಿಗಳ ಪರ ರ್ಯಾಲಿ ನಡೆಸಿದ್ದ ಬಿಜೆಪಿಯ ಇಬ್ಬರು ಸಚಿವರು ರಾಜೀನಾಮೆ ನೀಡಿದ್ದಾರೆ. ಅದೇ ರ್ಯಾಲಿಯಲ್ಲಿ ಭಾಗವಹಿಸಿದ್ದರು ಎನ್ನಲಾದ ಶಾಸಕರೊಬ್ಬರಿಗೆ ಸಚಿವರಾಗಿ ಭಡ್ತಿ ನೀಡಲಾಗಿದೆ. ಕಥುವಾ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಯಾರ ಪರ ನಿಲ್ಲಬೇಕು ಎಂದು ಮೆಹಬೂಬಾ ಮುಫ್ತಿ ಹಾಗು ಬಿಜೆಪಿ ಗೊಂದಲಕ್ಕೊಳಗಾಗಿರುವುದು ಏಕೆ?” ಎಂದು ಟ್ವೀಟ್ ಮಾಡಿದ್ದಾರೆ.