ರಾಜಕಾರಣಿಗಳಿಗೆ ನಮ್ಮ ಸ್ವಾಭಿಮಾನವನ್ನು ಒತ್ತೆಯಿಡುವುದು ಬೇಡ

Update: 2018-04-30 18:57 GMT

ಮಾನ್ಯರೇ,

ರಾಜ್ಯಾದ್ಯಂತ ಚುನಾವಣೆಯಲ್ಲಿ ಸ್ಪರ್ಧೆಗಿಳಿದ ವಿವಿಧ ಪಕ್ಷಗಳ ಅಭ್ಯರ್ಥಿಗಳು ತಮ್ಮ ವಿರುದ್ಧ ಕಣದಲ್ಲಿರುವವರನ್ನು ಸೋಲಿಸಿ ಗೆಲುವು ತಮ್ಮದಾಗಿಸಿಕೊಳ್ಳಲು ಗರಿಷ್ಠ ಮಟ್ಟದ ಪ್ರಯತ್ನದಲ್ಲಿ ತೊಡಿಗಿರುವುದು ಈಗ ಎಲ್ಲೆಡೆ ಸಾಮಾನ್ಯವಾಗಿದೆ. ಮುಂದುವರಿದು ಕೆಲವರು ತಾವು ಸೋಲುವುದರ ಜೊತೆಜೊತೆಗೆ ಇನ್ನೊಬ್ಬರನ್ನು ಸೋಲಿಸಲೆಂದೇ ಅಖಾಡಕ್ಕಿಳಿದಿದ್ದಾರೆ. ರಾಜಕಾರಣಿಗಳು ಜನರನ್ನು ತಮ್ಮೆಡೆಗೆ ಸೆಳೆಯುತ್ತಿರುವ ದೃಶ್ಯಗಳು ಮಾಧ್ಯಮಗಳಲ್ಲಿ ವಿಶೇಷ ಜಾಗವನ್ನು ಪಡೆದುಕೊಳ್ಳುತ್ತಿವೆ. ಪತ್ರಿಕೆಗಳ ಪುಟಗಳನ್ನು ತಿರುವುತ್ತ ನೋಡಿದಾಗ, ಅರೇ ಈ ವ್ಯಕ್ತಿ ಮೊನ್ನೆ ತನಕ ಆ ಪಕ್ಷದಲ್ಲಿದ್ದವನು ಈಗ ಈ ಪಕ್ಷಕ್ಕೆ ಸೇರ್ಪಡೆಗೊಂಡಿರುವುದೇ? ಎಂದೆಲ್ಲ ಬಹುತೇಕ ಮನೆಗಳಲ್ಲಿ ಕುಟುಂಬದ ಹಿರಿಯ ಸದಸ್ಯರು ಪರಸ್ಪರ ಚರ್ಚೆಯಲ್ಲಿ ತೊಡಗಿರುವುದು ಮಾಮೂಲಾಗಿದೆ. ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಂತೂ ಚುನಾವಣೆ ಯದ್ದೇ ಬಿಸಿಬಿಸಿ ಚರ್ಚೆ, ಬ್ರೇಕಿಂಗ್ ನ್ಯೂಸ್‌ಗಳ ಸುರಿಮಳೆ. ಅದನ್ನು ನೊಡುತ್ತಾ ಇಡೀ ದಿನ ಟಿವಿಯ ಮುಂದೆ ಕುಳಿತು ಕೊಳ್ಳುವವರು ಒಂದೆಡೆಯಾದರೆ, ಮಗದೊಂದೆಡೆ ಕೆಲವರಿಗೆ ಎದ್ದರೂ ಕುಳಿತರೂ ಈ ಬಾರಿ ಯಾರಿಗೆ ರಾಜ್ಯದ ಅಧಿಕಾರದ ಗದ್ದುಗೆ ದಕ್ಕುವುದು ಎಂಬ ವಿಷಯದ ಸುತ್ತ ಪ್ರಮುಖ ಸಮಾಲೊಚನೆ.

ಇದೇ ಸಂದರ್ಭದಲ್ಲಿ ಕೆಲವು ಯುವಕರು ರಾಜಕಾರಣಿಗಳ ಹುಚ್ಚು ಅಭಿಮಾನದಿಂದಾಗಿ ತಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುತ್ತಿರುವುದು ಬಹುತೇಕ ಕಡೆಗಳಲ್ಲಿ ಕಾಣಲು ಸಿಗುತ್ತಿದೆ. ಕಷ್ಟಪಟ್ಟು ದುಡಿದು ತನ್ನ ಮಡದಿ, ಮಕ್ಕಳು, ತಂದೆತಾಯಿಗಳಿಗೆ ನೆರವಾಗಬೇಕಾದಂತಹ ಯುವಶಕ್ತಿಯು ರಾಜಕಾರಣಿಗಳ ಗಾಳಕ್ಕೆ ಸಿಲುಕಿ ತಮ್ಮ ಅಮೂಲ್ಯ ಸಮಯವನ್ನು ನಾಶಪಡಿಸಿಕೊಳ್ಳುತ್ತಿರುವುದು ನಿಜಕ್ಕೂ ಖೇದಕರದ ಸಂಗತಿಯಾಗಿದೆ. ಈ ಸಂದರ್ಭದಲ್ಲಿ ಒಬ್ಬರು ಇನ್ನೊಬ್ಬರನ್ನು ನೋಡಿ ಕುಡಿತದ ದಾಸರಾಗುತ್ತಿದ್ದಾರೆ. ಕೊರಳಿಗೆ ರಾಜಕೀಯ ಪಕ್ಷಗಳ ಗುರುತಿರುವ ಬಟ್ಟೆ ಹಾಕಿಕೊಂಡು ಕುಡಿತದ ನಶೆಯಲ್ಲಿ ಅಲ್ಲಿ ಇಲ್ಲಿ ಬಿದ್ದು ತಮ್ಮ ಗೌರವ ಘನತೆಯನ್ನು ತಾವೇ ಹಾಳು ಮಾಡಿಕೊಳ್ಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇಂದು ನಮ್ಮನ್ನೇ ನೆಚ್ಚಿ ನಮ್ಮ ಮಡದಿ ಮಕ್ಕಳು ಬದುಕುತ್ತಿರುವಾಗ ನಾವು ಮಾತ್ರ ಅವರ ಯೋಗಕ್ಷೇಮವನ್ನು ಕಡೆಗಣಿಸಿ ರಾಜಕಾರಣಿಗಳ ಹಿಂದೆ ಜೈಕಾರ ಹಾಕುತ್ತ ಅಳೆದಾಡುವುದು ಎಷ್ಟರ ಮಟ್ಟಿಗೆ ಸರಿ? ಕುಟುಂಬದ ನಿರ್ವಹಣೆಯ ಜವಾಬ್ದಾರಿ ನಮ್ಮದೇ ಹೊರತು ಇನ್ನಾರೂ ತಗೆದುಕೊಳ್ಳಲಾರರು. ನಮಗೇನಾದರು ಕಷ್ಟ ಎದುರಾದರೇ ನಾಳೆ ಈ ರಾಜಕಾರಣಿಗಳು ಇತ್ತ ತಿರುಗಿಯು ಕೂಡಾ ನೋಡಲಾರರು. ಮತ್ತೆ ಕೆಲವರು ದಿನವಿಡೀ ಪ್ರಚಾರ ಕಾರ್ಯದಲ್ಲಿ ತೊಡಗಿ ರಾತ್ರಿ ಪುಕ್ಕಟೆ ಸಿಗುವ ಹೆಂಡವನ್ನು ಗಂಟಲಪೂರ್ತಿ ಕುಡಿದು ಅಲ್ಲಿ ಇಲ್ಲಿ ನರಳುತ್ತಾ ಬಿದ್ದುಕೊಂಡಿರುತ್ತಾರೆ. ಇಂತಹ ಸಂದರ್ಭದಲ್ಲಿ ಮನೆಯಲ್ಲಿ ನಮ್ಮ ಬರುವಿಕೆಯ ನಿರೀಕ್ಷೆಯಲ್ಲಿರುವ ಕುಟುಂಬಸ್ಥರು ಎಷ್ಟು ತೊಂದರೆಯನ್ನು ಅನುಭವಿಸುವರು ಎಂಬುದನ್ನು ಒಮ್ಮೆ ಊಹಿಸಿ ನೋಡಿದರೆ ನಿಮಗೆ ಅರ್ಥವಾಗುವುದು.

ಚುನಾವಣೆ ವೇಳೆಯಲ್ಲಿ ನಮ್ಮನ್ನು ಬಳಸಿಕೊಳ್ಳುವವರು ನಮ್ಮ ಹಿತಚಿಂತಕರಾಗಿರುವವರಲ್ಲ. ಬದಲಾಗಿ ನಾವು ಹಾಳಾದರೂ ಪರವಾಗಿಲ್ಲ, ನಮ್ಮ ಕುಟುಂಬಗಳು ನಾಶಗೊಂಡರೂ ಪರವಾಗಿಲ್ಲ, ಅವರು ಮಾತ್ರ ಗೆಲುವು ಸಾಧಿಸಬೇಕು ಎಂಬುದೊಂದೇ ಈ ಮಹನೀಯರ ಲೆಕ್ಕಾಚಾರವಾಗಿರುತ್ತದೆ. ಆದ್ದರಿಂದ ಯಾರು ಎಷ್ಟೇ ಆಸೆ ಆಮಿಷಗಳನ್ನು ನೀಡಿದರೂ ನಾವು ಅದರ ಪ್ರಭಾವಕ್ಕೊಳಗಾಗದೇ ನಮ್ಮಿಂದ ಸಾಧ್ಯವಾದಷ್ಟು ಮಾನ ಮರ್ಯಾದೆಯಿಂದ ಬದುಕು ಸಾಗಿಸೋಣ.

ಆರ್ ಎಚ್. ಇಟಗಿ, ರೋಣ

Writer - ಆರ್ ಎಚ್. ಇಟಗಿ, ರೋಣ

contributor

Editor - ಆರ್ ಎಚ್. ಇಟಗಿ, ರೋಣ

contributor

Similar News